ಬೆಂಗಳೂರು: ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆಯನ್ನು ತಂತ್ರಜ್ಞಾನದ ಬಳಕೆಯೊಂದಿಗೆ ಕೇವಲ 16 ದಿನಗಳಲ್ಲಿ ಪೂರ್ಣಗೊಳಿಸಬಹುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
ಸದಾಶಿವನಗರದ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಸಮೀಕ್ಷೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಯಾವುದೇ ಸಂಘರ್ಷವಿಲ್ಲ ಎಂದು ಸ್ಪಷ್ಟಪಡಿಸಿದರು. “ರಾಜ್ಯ ಸರ್ಕಾರವು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಅರಿಯಲು ಈ ಸಮೀಕ್ಷೆಯನ್ನು ಕೈಗೊಳ್ಳುತ್ತಿದೆ. ನಮ್ಮ ಅಗತ್ಯಕ್ಕೆ ತಕ್ಕಂತೆ ಮಾನದಂಡಗಳನ್ನು ರೂಪಿಸಿ ಸಮೀಕ್ಷೆ ನಡೆಸುತ್ತೇವೆ. ಆದರೆ, ಕೇಂದ್ರ ಸರ್ಕಾರವು ಕೇವಲ ಜನಸಂಖ್ಯೆಯ ಅಂಕಿಅಂಶಗಳನ್ನು ಸಂಗ್ರಹಿಸುತ್ತದೆ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸುವುದಿಲ್ಲ” ಎಂದು ಅವರು ಹೇಳಿದರು.
ಎಸ್‌ಐಟಿ ತಂಡದಿಂದ ಐಪಿಎಸ್ ಅಧಿಕಾರಿಯ ಹೊರಗುಳಿಕೆ:
ಎಸ್‌ಐಟಿ ತಂಡದಿಂದ ಐಪಿಎಸ್ ಅಧಿಕಾರಿಯೊಬ್ಬರು ಹೊರಗುಳಿಯುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, “ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ಆದರೆ, ಅನಧಿಕೃತವಾಗಿ ತಿಳಿದಂತೆ, ವೈಯಕ್ತಿಕ ಕಾರಣಗಳಿಂದ ತಂಡದಿಂದ ಹೊರಗುಳಿಯಲು ಅವರು ಪತ್ರ ಬರೆದಿದ್ದಾರೆ. ಒಂದು ವೇಳೆ ಇದು ಸತ್ಯವಾದರೆ, ಅವರ ಬದಲಿಗೆ ಬೇರೊಬ್ಬರನ್ನು ನೇಮಕ ಮಾಡಲಾಗುವುದು” ಎಂದರು.
ಆಂಧ್ರದಲ್ಲಿ ಬಿಜೆಪಿ ಮುಖಂಡರ ಹತ್ಯೆ ಪ್ರಕರಣ:
ಆಂಧ್ರಪ್ರದೇಶದಲ್ಲಿ ಬೆಂಗಳೂರಿನ ಬಿಜೆಪಿ ಮುಖಂಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, “ಆಂಧ್ರಪ್ರದೇಶ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹತ್ಯೆಯಾದವರು ನಮ್ಮ ರಾಜ್ಯದವರಾಗಿರುವುದರಿಂದ, ಆಂಧ್ರ ಪೊಲೀಸರು ಬೆಂಗಳೂರಿಗೆ ಬಂದು ತನಿಖೆ ನಡೆಸಲಿದ್ದಾರೆ. ಅವರ ತನಿಖೆಗೆ ನಮ್ಮ ಪೊಲೀಸರು ಸಂಪೂರ್ಣ ಸಹಕಾರ ನೀಡಲಿದ್ದಾರೆ” ಎಂದು ಪರಮೇಶ್ವರ ತಿಳಿಸಿದರು.