ಬೆಂಗಳೂರು: ರಾಜ್ಯ ಸರಕಾರವು ಸೋಮವಾರದಿಂದ ಆರಂಭಿಸಲು ಉದ್ದೇಶಿಸಿರುವ ಶೈಕ್ಷಣಿಕ-ಸಾಮಾಜಿಕ ಸಮೀಕ್ಷೆಯನ್ನು ಮುಂದಕ್ಕೆ ಹಾಕಬೇಕು ಅಥವಾ ಕನಿಷ್ಠ ಮೂರು ತಿಂಗಳ ಕಾಲಾವಕಾಶವನ್ನು ವಿಸ್ತರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಮಾಧ್ಯಮ ಹೇಳಿಕೆಯಲ್ಲಿ ಈ ಕುರಿತು ಮಾತನಾಡಿರುವ ಅವರು, “ಸಮೀಕ್ಷೆಗೆ ನಮಗೆ ಯಾವುದೇ ತಕರಾರಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಕಾಲಕಾಲಕ್ಕೆ ಸಮೀಕ್ಷೆ ನಡೆಯಬೇಕು, ನಡೆಯಲಿ. ಆದರೆ, ಕೇವಲ 15 ದಿನಗಳಲ್ಲಿ 6.5 ಕೋಟಿ ಜನರ ಸಮೀಕ್ಷೆ ಸಾಧ್ಯವೇ? ಈಗ ನವರಾತ್ರಿ ಹಬ್ಬದ ಸಂದರ್ಭ. ಸಮೀಕ್ಷೆ ನಡೆಸುವ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಸರಕಾರಿ ಸಿಬ್ಬಂದಿಗೆ ಹಬ್ಬ, ಸಂಭ್ರಮ ಇರಬಾರದೇ? ರಾಜ್ಯ ಸರಕಾರಕ್ಕೆ ಮಾತ್ರವೇ ನವರಾತ್ರಿಯೇ?” ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ನವರಾತ್ರಿ ಸಂದರ್ಭದಲ್ಲಿ ಸಮೀಕ್ಷೆ ಸಾಧ್ಯವಿಲ್ಲ:
ನವದುರ್ಗೆಯರನ್ನು ಪೂಜಿಸುವ ಈ ಸಮಯದಲ್ಲಿ ಮಹಿಳೆಯರಿಗೆ ತಮ್ಮ ಮನೆಗಳಲ್ಲಿ ಧಾರ್ಮಿಕ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿಯಿದೆ. “ಇಂತಹ ಸಂದರ್ಭದಲ್ಲಿ ಸಮೀಕ್ಷೆ ಹೇಗೆ ಸಾಧ್ಯ? ಇದು ಸಕಾಲವಲ್ಲ. ಆದ್ದರಿಂದ ಸಮೀಕ್ಷೆಯನ್ನು ಮುಂದೂಡಿ ಅಥವಾ ಕಾಲಾವಕಾಶವನ್ನು ವಿಸ್ತರಿಸಿ. ಜನರಿಗೆ ಪ್ರಾಮಾಣಿಕ, ವಸ್ತುನಿಷ್ಠ ಮತ್ತು ಸತ್ಯನಿಷ್ಠ ಸಮೀಕ್ಷೆ ಬೇಕು. ಇಲ್ಲವಾದರೆ, ಈ ಸಮೀಕ್ಷೆಯೂ ಹಿಂದಿನ ಎರಡು ಸಮೀಕ್ಷಾ ವರದಿಗಳ ಗತಿಯನ್ನೇ ಹೊಂದಲಿದೆ” ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ತೆರಿಗೆದಾರರ ಹಣದ ದುರ್ಬಳಕೆ ತಡೆಯಿರಿ:
“ಜನರ ತೆರಿಗೆ ಹಣವನ್ನು ವ್ಯರ್ಥವಾಗಿ ಪೋಲು ಮಾಡಬೇಕೆ? ಇನ್ನೆಷ್ಟು ಕೋಟಿ ಖರ್ಚಾಗಬೇಕು? ಕನಿಷ್ಠ ಮೂರು ತಿಂಗಳ ಕಾಲಾವಕಾಶವನ್ನು ನೀಡಿ, ಹಂತಹಂತವಾಗಿ ಸಮೀಕ್ಷೆ ನಡೆಸಿ. ಆತುರಾತುರವಾಗಿ ಸಮೀಕ್ಷೆ ನಡೆಸಿ ಯಾರ ಆನಂದಕ್ಕೆ? ಎಲ್ಲರನ್ನೂ ಒಳಗೊಳ್ಳುವ, ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಆದರ್ಶ ಸಮೀಕ್ಷೆ ಅಗತ್ಯ. ತಪ್ಪಿದರೆ, ಈ ಸಮೀಕ್ಷೆಯ ಹಿಂದಿರುವ ಶಕ್ತಿಗಳಿಗೆ ಶಿಕ್ಷೆ ತಪ್ಪಿದ್ದಲ್ಲ” ಎಂದು ಅವರು ರಾಜ್ಯ ಸರಕಾರಕ್ಕೆ ಕಿವಿಮಾತು ಹೇಳಿದ್ದಾರೆ.