ಬೆಂಗಳೂರು: ರಾಜ್ಯ ಸರಕಾರವು ಯಾವುದೇ ಪೂರ್ವತಯಾರಿಯಿಲ್ಲದೇ ಜಾತಿ ಗಣತಿಯನ್ನು ಆತುರಾತುರವಾಗಿ ಕೈಗೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಶೈಕ್ಷಣಿಕ ತೊಂದರೆಯಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯೇಂದ್ರ, ಜಾತಿ ಗಣತಿಗೆ ಶಿಕ್ಷಕರನ್ನು ನಿಯೋಜಿಸಿರುವುದರಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದರಿಂದ ಸರಕಾರಿ ಶಾಲೆಗಳಲ್ಲಿ ಓದುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಒಂದೊಂದು ದಿನವೂ ಮಹತ್ವದ್ದಾಗಿದ್ದು, ಈ ರಜೆಯಿಂದ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದರು.
ಜಿಬಿಎ ಸಭೆಯಲ್ಲಿ ಗೌಪ್ಯತೆ, ತಯಾರಿ ಇಲ್ಲದ ಚುನಾವಣೆ ಘೋಷಣೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮೊದಲ ಸಭೆಯನ್ನು ಕರೆದಿರುವ ರಾಜ್ಯ ಸರಕಾರ, ಶಾಸಕರಿಗೆ ಕಾರ್ಯಸೂಚಿಯನ್ನೇ ನೀಡಿಲ್ಲ ಎಂದು ವಿಜಯೇಂದ್ರ ಆಕ್ಷೇಪಿಸಿದರು. “ಜಿಬಿಎ ಸಭೆಯ ಅಜೆಂಡವನ್ನೂ ಗೌಪ್ಯವಾಗಿರಿಸಲಾಗಿದೆ. ಡಿಸೆಂಬರ್‌ನಲ್ಲಿ ಚುನಾವಣೆ ನಡೆಸುವುದಾಗಿ ಘೋಷಿಸಿದ್ದಾರೆ, ಆದರೆ ಯಾವ ತಯಾರಿಯೂ ಇಲ್ಲ. ಅಧಿಕಾರಿಗಳ ಸಂಖ್ಯೆ, ಮೂಲಭೂತ ಸೌಕರ್ಯಗಳು ಏನೂ ಇಲ್ಲದೇ ರಾಜಕೀಯ ಚಟಕ್ಕೆ ಘೋಷಣೆ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
ಗುಂಡಿಗಳ ಮಧ್ಯೆ ರಸ್ತೆ ಹುಡುಕುವ ದಾರುಣ ಸ್ಥಿತಿ
ಬೆಂಗಳೂರಿನ ರಸ್ತೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಜಯೇಂದ್ರ, “ಗುಂಡಿಗಳ ನಡುವೆ ರಸ್ತೆ ಹುಡುಕುವ ದಾರುಣ ಸ್ಥಿತಿ ಬಂದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಮಂತ್ರಿಯವರ ಮನೆ ಮುಂದಿನ ಗುಂಡಿಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಬೆಂಗಳೂರಿನ ಜನತೆ ಈ ಸರಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ತುರ್ತಾಗಿ ಗುಂಡಿಗಳನ್ನು ಮುಚ್ಚುವ ಕೆಲಸವಾಗಬೇಕು” ಎಂದು ಒತ್ತಾಯಿಸಿದರು.
ರೈತರ ಸಂಕಷ್ಟಕ್ಕೆ ಸರಕಾರದಿಂದ ಸ್ಪಂದನೆ ಇಲ್ಲ
ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿಜಯೇಂದ್ರ ಆತಂಕ ವ್ಯಕ್ತಪಡಿಸಿದರು. “ಕೃಷಿ ಮತ್ತು ಕಂದಾಯ ಸಚಿವರಿಗೆ ಸಂತ್ರಸ್ತ ರೈತರ ಭಾಗಕ್ಕೆ ಭೇಟಿ ನೀಡಲು ಸಮಯವಿಲ್ಲ. ಅವರು ಸಚಿವರಾಗಿರುವುದೇಕೆ?” ಎಂದು ಪ್ರಶ್ನಿಸಿದರು. ಬಿಜೆಪಿ ನಿಯೋಗವು ಬೀದರ್, ಗುಲ್ಬರ್ಗ, ರಾಯಚೂರು, ಯಾದಗಿರಿಗೆ ಭೇಟಿ ನೀಡಿ ರೈತರ ಸಂಕಷ್ಟವನ್ನು ಅರಿತಿದೆ. ಆದರೆ, ಮುಖ್ಯಮಂತ್ರಿಗಳು ಎ.ಸಿ. ಕೊಠಡಿಯಿಂದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಪರಿಹಾರಕ್ಕಾಗಿ ರೈತರು ಇನ್ನೆಷ್ಟು ದಿನ ಕಾಯಬೇಕು?
ಕೃಷಿ ಸಚಿವ ಕೃಷ್ಣಬೈರೇಗೌಡರು 10 ದಿನಗಳಲ್ಲಿ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಆದರೆ, ರೈತರು ಇನ್ನೆಷ್ಟು ದಿನ ಕಾಯಬೇಕು ಎಂದು ವಿಜಯೇಂದ್ರ ಪ್ರಶ್ನಿಸಿದರು. “ವಿಪಕ್ಷವು ಎಲ್ಲವನ್ನೂ ಟೀಕಿಸುತ್ತದೆ ಎಂದು ಭಾವಿಸುವ ಅಗತ್ಯವಿಲ್ಲ. ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವುದು ಸರಕಾರದ ಕರ್ತವ್ಯ” ಎಂದು ಒತ್ತಿ ಹೇಳಿದರು.
ಕಾಂಗ್ರೆಸ್‌ನಲ್ಲಿ ಎಲ್ಲವೂ ಗೊಂದಲಮಯ
ಕಾಂಗ್ರೆಸ್ ಸರಕಾರದಲ್ಲಿ ಎಲ್ಲವೂ ಗೊಂದಲಮಯವಾಗಿದೆ ಎಂದು ವಿಜಯೇಂದ್ರ ಆರೋಪಿಸಿದರು. “ಆಡಳಿತ ಪಕ್ಷದ ಸಚಿವರು, ಶಾಸಕರ ಪ್ರತಿಕ್ರಿಯೆಗಳಿಂದ ‘ಆಲ್ ಈಸ್ ನಾಟ್ ವೆಲ್’ ಎಂಬುದು ಸ್ಪಷ್ಟವಾಗಿದೆ. ಮಂಡ್ಯದಲ್ಲಿ ಮೈ ಶುಗರ್ ವಿಚಾರದಲ್ಲೂ ಗೊಂದಲವಿದೆ. ಜಿಬಿಎ ಸಭೆಗೆ ಗೈರಾಗುವ ತೀರ್ಮಾನ ಕೈಗೊಂಡಿದ್ದೇವೆ. ಯಾವುದೇ ಅಜೆಂಡವಿಲ್ಲದ ಸಭೆಗೆ ಹೋಗಿ ಏನು ಮಾಡುವುದು?” ಎಂದು ಪ್ರಶ್ನಿಸಿದರು. ರಾಜ್ಯ ಸರಕಾರವು ರಿಯಲ್ ಎಸ್ಟೇಟ್ ಮಾಫಿಯಾದೊಂದಿಗೆ ಸೇರಿಕೊಂಡು ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.