ಬೆಂಗಳೂರು: ಕಾನೂನು ಸುವ್ಯವಸ್ಥೆ ಕುಸಿತ, ಬೆಲೆ ಏರಿಕೆ ಹಾಗೂ ಅಭಿವೃದ್ಧಿಯ ಕೊರತೆ ಕುರಿತು ಜನರಲ್ಲಿ ಉಂಟಾಗಿರುವ ಆಕ್ರೋಶದಿಂದ ಗಮನ ಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಜನಗಣತಿ ವರದಿಯನ್ನು ಮುನ್ನೆಲೆಗೆ ತಂದಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ R. ಅಶೋಕ ಮಾಡಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ಅವರು, “10 ವರ್ಷಗಳ ಹಿಂದೆ ಆರಂಭವಾದ ಸಿಎಂ ಸಿದ್ದರಾಮಯ್ಯ ಅವರ ಜಾತಿ ಜನಗಣತಿ ಎಂಬ ಬೃಹತ್ ನಾಟಕ, ಮೆಗಾ ಸೀರಿಯಲ್ ರೀತಿ ಮುಂದುವರೆಯುತ್ತಿದೆ. ಬೆಲೆ ಏರಿಕೆ, ಶೂನ್ಯ ಅಭಿವೃದ್ಧಿ ಹಾಗೂ ಕಾನೂನು ಸುವ್ಯವಸ್ಥೆ ಕುಸಿತದ ವಿರುದ್ಧ ರಾಜ್ಯಾದ್ಯಂತ ಹರಡಿರುವ ಜನಾಕ್ರೋಶದಿಂದ ತಪ್ಪಿಸಿಕೊಳ್ಳಲು ಈ ವರದಿಯನ್ನು ಮುನ್ನೆಲೆಗೆ ತರುತ್ತಿರುವುದು ಸರಳ ರಾಜಕೀಯ ನಾಟಕ,” ಎಂದು ವ್ಯಂಗ್ಯವಾಡಿದ್ದಾರೆ.
ಸಮೀಪದ ಸಚಿವ ಸಂಪುಟ ಸಭೆಯ ಬಗ್ಗೆ ಪ್ರಶ್ನೆ:
ಅವರು ಮುಂದುವರೆದು, “ಇಂದಿನ ವಿಶೇಷ ಸಚಿವ ಸಂಪುಟ ಸಭೆಯಿಂದ ನಿಜಕ್ಕೂ ಸಾಧನೆಯಾದ್ದೇನು? ಜಾತಿ ಜನಗಣತಿ ಕುರಿತಾಗಿ ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಬರುವಂತಿಲ್ಲ ಎಂದರೆ, ಕಾರಣವೇನು?” ಎಂದು ಪ್ರಶ್ನಿಸಿದ್ದಾರೆ.
ಸಚಿವರಲ್ಲಿ ಪರಸ್ಪರ ವಿಶ್ವಾಸದ ಕೊರತೆ?
ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಸಚಿವರಿಂದ ಲಿಖಿತ ಉತ್ತರ ಪಡೆಯುವಂತೆ ಸೂಚನೆ ನೀಡಿದ್ದಾರೆಯೆಂಬ ಸುದ್ದಿಯ ಹಿನ್ನೆಲೆಯಲ್ಲಿ R. ಅಶೋಕ, “ಪರಸ್ಪರ ವಿಶ್ವಾಸದ ಕೊರತೆ ಇದೆಯೆ? ಅಥವಾ ಲಿಖಿತ ಉತ್ತರದ ಮೂಲಕ ಸಚಿವರನ್ನ ಬ್ಲಾಕ್‌ಮೇಲ್ ಮಾಡುವ ರಾಜಕೀಯ ಯಂತ್ರಣೆ ಇದೆಯೆ?” ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.