ಬೆಂಗಳೂರು: ಜಾತಿ ವ್ಯವಸ್ಥೆಯ ಚಲನರಹಿತ ಸ್ಥಿತಿಯಿಂದ ಸಮಾಜದಲ್ಲಿ ಪ್ರಗತಿಯ ವೇಗ ಕುಂಠಿತವಾಗಿದೆ. ಜಾತಿಯ ದೃಷ್ಟಿಕೋನವು ವೈಜ್ಞಾನಿಕ ಚಿಂತನೆಯ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಷಾದ ವ್ಯಕ್ತಪಡಿಸಿದರು. ಕುವೆಂಪು ಅವರ ಪ್ರಖರ ವೈಚಾರಿಕತೆ ಜಾತಿ ಅಸಮಾನತೆ ಇರುವವರೆಗೂ ಪ್ರಸ್ತುತವಾಗಿರುತ್ತದೆ ಎಂದು ಅವರು ತಿಳಿಸಿದರು.
ಜನ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಸಂಪಾದಿತ “ಕುವೆಂಪು ವಿಚಾರ ಕ್ರಾಂತಿ” ಕೃತಿಯ ಜನಾರ್ಪಣೆ ಸಂದರ್ಭದಲ್ಲಿ ಮಾತನಾಡಿದ ಸಿಎಂ, ಕುವೆಂಪು ಅವರ ವೈಚಾರಿಕತೆ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಶ್ಲಾಘಿಸಿದರು. “ಕುವೆಂಪು ಅವರ ಆಶಯ ಜಾತಿ ತಾರತಮ್ಯ ರಹಿತ ಸಮಾಜವಾಗಿತ್ತು. ಆದರೆ, ಇಂದು ಶಿಕ್ಷಣ ಹೆಚ್ಚಾದಂತೆ ಮೌಡ್ಯ ಮತ್ತು ಕಂದಾಚಾರಗಳು ಹೆಚ್ಚುತ್ತಿರುವುದು ವಿಷಾದಕರ. ಇದರಿಂದ ವೈಜ್ಞಾನಿಕ ಪ್ರಜ್ಞೆ ಬೆಳೆಯುತ್ತಿಲ್ಲ,” ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನಮ್ಮ ಸಂವಿಧಾನದಲ್ಲಿ ಕುವೆಂಪು ಮತ್ತು ಬಸವಣ್ಣನವರ ಆಶಯಗಳು ಅಡಕವಾಗಿವೆ. ಆದರೆ, ಸಂವಿಧಾನದ ಮೌಲ್ಯಗಳು ಮತ್ತು ಮಹತ್ವವನ್ನು ಜನರಿಗೆ ತಿಳಿಸುವ ಕೆಲಸ ಇನ್ನಷ್ಟು ಆಗಬೇಕು. ಈ ಉದ್ದೇಶದಿಂದಲೇ ‘ಸಂವಿಧಾನ ಓದು’ ಮತ್ತು ‘ಸಂವಿಧಾನ ಪೀಠಿಕೆ’ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಸಿಎಂ ವಿವರಿಸಿದರು.
ರಾಜಕಾರಣಿಯಾಗಿ ಕೆಲವು ಮಿತಿಗಳಿರುವುದನ್ನು ಒಪ್ಪಿಕೊಂಡ ಅವರು, “ಗ್ರಾಮೀಣ ಭಾಗಗಳಲ್ಲಿ ದೇವಸ್ಥಾನಕ್ಕೆ ಹೋಗದಿದ್ದರೆ ಜನರು ತಪ್ಪು ಕತೆ ಕಟ್ಟುತ್ತಾರೆ. ದೇವಸ್ಥಾನಕ್ಕೆ ಹೋದರೆ ಕುಂಕುಮ ಇಡುವುದಕ್ಕೂ ಕತೆ ಕಟ್ಟುತ್ತಾರೆ. ಇಂತಹ ಜನರ ನಂಬಿಕೆಗಳಿಂದ ಮತಗಳ ಮೇಲೆ ಪರಿಣಾಮ ಬೀರುತ್ತದೆ,” ಎಂದು ಹೇಳಿದರು.
ಕಾನೂನು ಒಂದೇ ಸಾಮಾಜಿಕ ಬದಲಾವಣೆಗೆ ಸಾಕಾಗದು ಎಂದ ಅವರು, “ಜನರಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆ ಬೆಳೆಯದಿದ್ದರೆ ಕಾನೂನಿನಿಂದ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ. ಈ ಕಾರಣಕ್ಕೆ ಮೌಡ್ಯ ನಿಷೇಧ ಕಾಯ್ದೆ ಸಂಪೂರ್ಣ ಪರಿಣಾಮಕಾರಿಯಾಗಿಲ್ಲ. ಆದರೂ, ಎಲ್ಲ ಕಾನೂನುಗಳು ಸಂವಿಧಾನದ ಚೌಕಟ್ಟಿನೊಳಗೆ ಇರಬೇಕು,” ಎಂದರು.
ಕುವೆಂಪು ಅವರ “ಗುಡಿ, ಚರ್ಚು, ಮಸೀದಿಗಳನ್ನು ಬಿಟ್ಟು ಬನ್ನಿ, ಬಡತನದ ಬೇರನ್ನು ಕಿತ್ತುಹಾಕಿ” ಎಂಬ ಕರೆಯನ್ನು ಉಲ್ಲೇಖಿಸಿದ ಸಿಎಂ, ಈ ಆಶಯವನ್ನು ಸಮಾಜ ಪಾಲಿಸಿದರೆ ಅಸಮಾನತೆಯಿಂದ ಸಮಾನತೆಯ ಕಡೆಗೆ ಸಾಗಬಹುದು ಎಂದರು. ಕುವೆಂಪು ಅವರ ಆಶಯಗಳು ಜಾಗತಿಕವಾಗಿ ಅನ್ವಯವಾಗುವುದರಿಂದ ಈ ಕೃತಿಯನ್ನು ಇತರ ಭಾಷೆಗಳಿಗೂ ತರ್ಜುಮೆ ಮಾಡಬೇಕು ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ದ್ವಿಭಾಷಾ ಸೂತ್ರವನ್ನು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದ ಸಿಎಂ, “ಇದನ್ನು ಸರ್ಕಾರದ ಧೋರಣೆಯನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ,” ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ನಾಡೋಜ ಡಾ. ಹಂ.ಪ. ನಾಗರಾಜಯ್ಯ, ವಿಶ್ರಾಂತ ನ್ಯಾಯಾಧೀಶ ಎಚ್.ಎನ್. ನಾಗಮೋಹನ್ ದಾಸ್, ವಿಶ್ರಾಂತ ಕುಲಪತಿ ಡಾ. ಚಿದಾನಂದಗೌಡ, ಕೃತಿಯ ಸಂಪಾದಕ ಪ್ರೊ. ಬರಗೂರು ರಾಮಚಂದ್ರಪ್ಪ, ಜನ ಪ್ರಕಾಶನದ ಬಿ. ರಾಜಶೇಖರಮೂರ್ತಿ, ಎಚ್.ಎನ್. ಹರಿ, ಮತ್ತು ಎ.ವಿ. ಶ್ರೀಹರಿ ಉಪಸ್ಥಿತರಿದ್ದರು.