ಮೈಸೂರು ಅರಸರ ಕೊಡುಗೆ ಅಪಾರ; ಅರಸು ಸಮುದಾಯಕ್ಕೆ ಮೀಸಲಾತಿ ಕುರಿತು ಸರ್ಕಾರದಿಂದ ಚರ್ಚೆ
ಬೆಂಗಳೂರು: “ಮೈಸೂರು ಅರಸರು ಮತ್ತು ಅವರ ವಂಶಸ್ಥರು ಮಾನವ ಧರ್ಮವನ್ನು ಮೂಲವಾಗಿಟ್ಟುಕೊಂಡು ಜಾತ್ಯಾತೀತ ಮತ್ತು ಧರ್ಮಾತೀತ ರೀತಿಯಲ್ಲಿ ಕರ್ನಾಟಕವನ್ನು ಕಟ್ಟಿದ ಇತಿಹಾಸವನ್ನು ಅರಸು ಸಮುದಾಯ ಹೊಂದಿದೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ಲಾಘಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಅರಸು ಅಸೋಸಿಯೇಷನ್‌ನ ಸುವರ್ಣ ಮಹೋತ್ಸವದಲ್ಲಿ ಮಾತನಾಡಿದ ಅವರು, “ಅರಸು ಸಮುದಾಯವು ಗಾತ್ರದಲ್ಲಿ ಚಿಕ್ಕದಿರಬಹುದು, ಆದರೆ ರಾಜ್ಯಕ್ಕೆ ಅವರ ಕೊಡುಗೆ ಅಪಾರವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪರಾಜಮ್ಮಣ್ಣಿ, ಜಯಚಾಮರಾಜೇಂದ್ರ ಒಡೆಯರ್ ಸೇರಿದಂತೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕನ್ನಂಬಾಡಿ ಕಟ್ಟೆ, ವಾಣಿವಿಲಾಸ ಸಾಗರ ಅಣೆಕಟ್ಟು, ಜೆ.ಸಿ. ಎಂಜಿನಿಯರ್ ಕಾಲೇಜು, ವಿಕ್ಟೋರಿಯಾ ಆಸ್ಪತ್ರೆಯಂತಹ ಜನೋಪಕಾರಿ ಕಾರ್ಯಗಳಿಗೆ ಮೈಸೂರು ಅರಸರು ಅಡಿಪಾಯ ಹಾಕಿದ್ದಾರೆ” ಎಂದು ಕೊಂಡಾಡಿದರು.
“ವಿದ್ಯುತ್ ಉತ್ಪಾದನೆಯಿಂದ ಹಿಡಿದು ರಾಜ್ಯದ ಪ್ರಮುಖ ಸಂಸ್ಥೆಗಳ ಸ್ಥಾಪನೆಗೆ ಮೈಸೂರು ಒಡೆಯರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅವರು ನೆಟ್ಟ ಮರದ ಫಲವನ್ನು ಇಂದಿಗೂ ನಾವೆಲ್ಲರೂ ಆನಂದಿಸುತ್ತಿದ್ದೇವೆ” ಎಂದು ಶಿವಕುಮಾರ್ ಹೇಳಿದರು.
ಮೀಸಲಾತಿ ಮತ್ತು ನಿವೇಶನಕ್ಕೆ ಸರ್ಕಾರದ ಭರವಸೆ
ಅರಸು ಸಮುದಾಯಕ್ಕೆ ಮೀಸಲಾತಿ ಮತ್ತು ಇತರ ಸೌಲಭ್ಯಗಳ ಕುರಿತು ಮನವಿ ಸಲ್ಲಿಸಲಾಗಿದೆ ಎಂದು ಉಲ್ಲೇಖಿಸಿದ ಶಿವಕುಮಾರ್, “ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು. ಸಂಘಕ್ಕೆ ನಿವೇಶನ ನೀಡುವ ಕುರಿತು ಮನವಿಯೂ ಬಂದಿದೆ. ಬೆಂಗಳೂರು ಅಭಿವೃದ್ಧಿಯ ಜವಾಬ್ದಾರಿಯನ್ನು ನಾನು ಹೊತ್ತಿದ್ದೇನೆ. ಸಂಘದ ಪ್ರಮುಖರು ಮತ್ತು ರಾಜವಂಶಸ್ಥರೊಂದಿಗೆ ಚರ್ಚಿಸಿ ಈ ಬೇಡಿಕೆಯನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
“ಮೈಸೂರು ಮಹಾರಾಜರು ಯಾವುದೇ ಧರ್ಮದ ಬಗ್ಗೆ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನವಾಗಿ ಸೇವೆ ಸಲ್ಲಿಸಿದ್ದಾರೆ. ಧರ್ಮ ಯಾವುದೇ ಆಗಿರಲಿ, ದೈವ ಒಂದೇ. ಪೂಜೆಯ ವಿಧಾನ ಬೇರೆಯಾದರೂ ಭಕ್ತಿಯ ತತ್ವ ಒಂದೇ” ಎಂದು ಶಿವಕುಮಾರ್ ಒತ್ತಿ ಹೇಳಿದರು.
“ನಾವು ಯಾವ ಜಾತಿಯಲ್ಲಿ ಹುಟ್ಟಬೇಕೆಂದು ಆಯ್ಕೆ ಮಾಡಿಕೊಂಡಿಲ್ಲ. ಆದರೆ ಅರಸು ಸಮುದಾಯದಿಂದ ಕರ್ನಾಟಕಕ್ಕೆ ಸಿಕ್ಕ ಕೊಡುಗೆಗೆ ನಾವೆಲ್ಲರೂ ಋಣಿಗಳಾಗಿದ್ದೇವೆ. ಕರ್ನಾಟಕ ಸರ್ಕಾರದ ಪರವಾಗಿ ನಾನು ಧನ್ಯವಾದ ಸಮರ್ಪಿಸುತ್ತೇನೆ” ಎಂದರು.
ದೇವರಾಜ ಅರಸರ ಕೊಡುಗೆ ಶಾಶ್ವತ
“ದೇವರಾಜ ಅರಸರು ಭೂರಹಿತ ಬಡವರಿಗಾಗಿ ‘ಉಳುವವನೇ ಭೂಮಿಯ ಒಡೆಯ’ ಕಾನೂನು ಜಾರಿಗೆ ತಂದು ಇತಿಹಾಸದಲ್ಲಿ ಶಾಶ್ವತ ಛಾಪು ಮೂಡಿಸಿದ್ದಾರೆ. ಅವರಿಗೆ ಜಾತಿಯ ಗಡಿಗಳಿರಲಿಲ್ಲ, ಆದರೆ ನಾಯಕತ್ವದ ಗುಣವಿತ್ತು. ಹಿಂದುಳಿದ ಮತ್ತು ಮೇಲ್ವರ್ಗದ ರಾಜಕಾರಣಿಗಳಿಗೆ ಬಲವಾದ ಅಡಿಪಾಯ ನೀಡಿದವರು ದೇವರಾಜ ಅರಸರು” ಎಂದು ಶಿವಕುಮಾರ್ ಕೊಂಡಾಡಿದರು.
“ಅರಸು ಸಮುದಾಯವು ಸಂಪತ್ತಿನ ಮಧ್ಯೆಯೂ ಸರಳತೆಯನ್ನು ಕಾಪಾಡಿಕೊಂಡಿದೆ. ಸಂಪತ್ತಿಗೆ ಬೆಲೆ ಕಟ್ಟಬಹುದಾದರೂ ಸರಳತೆಗೆ ಬೆಲೆಯಿಲ್ಲ. ಇತರರಿಗೆ ಅನ್ಯಾಯವಾಗದಂತೆ ಬದುಕುವುದೇ ನಿಜವಾದ ಧರ್ಮ” ಎಂದರು.
ಆತ್ಮಸ್ಥೈರ್ಯ ಕಾಪಾಡಿಕೊಳ್ಳಿ
“ಅರಸು ಸಮುದಾಯದ ಎಲ್ಲ ವಯೋಮಾನದವರಿಗೆ ನನ್ನ ವಿನಂತಿಯೆಂದರೆ, ನಿಮ್ಮ ಆತ್ಮಸ್ಥೈರ್ಯವನ್ನು ಕಾಪಾಡಿಕೊಳ್ಳಿ. ಮಹಾರಾಜರು ಮತ್ತು ದೇವರಾಜ ಅರಸರು ಸ್ವತಃ ತೊಂದರೆ ಅನುಭವಿಸಿದರೂ ಸಮಾಜದ ಪರವಾಗಿ ನಿಂತವರು. ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಾಧ್ಯ ಎಂಬ ಗುರುಗಳ ಮಾತಿನಂತೆ ನಾವೆಲ್ಲರೂ ನಡೆಯಬೇಕು” ಎಂದು ಕರೆ ನೀಡಿದರು.
ಮಾಧ್ಯಮ ಪ್ರತಿಕ್ರಿಯೆ: ಬಿಜೆಪಿಗೆ ಟೀಕೆ
ಬಿಜೆಪಿಯ ಧರ್ಮಸ್ಥಳ ಯಾತ್ರೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, “ಬಿಜೆಪಿಯವರಿಗೆ ರಾಜಕೀಯ ಇಚ್ಛಾಶಕ್ತಿಯಿದ್ದರೆ, ಭದ್ರಾ ಮೇಲ್ದಂಡೆ, ಬೆಂಗಳೂರು ಅಭಿವೃದ್ಧಿ, ಮೇಕೆದಾಟು, ಮಹದಾಯಿ ಯೋಜನೆಗಳಿಗೆ ಅನುದಾನ ತರಬೇಕು. ಧರ್ಮಸ್ಥಳದಲ್ಲಿ ವೈಯಕ್ತಿಕ ಲಾಭಕ್ಕಾಗಿ ಪ್ರಾರ್ಥನೆ ಮಾಡುವ ಬದಲು, ದೆಹಲಿಯಲ್ಲಿ ರಾಜ್ಯದ ಹಕ್ಕುಗಳಿಗಾಗಿ ಹೋರಾಟ ಮಾಡಲಿ” ಎಂದು ಛೇಡಿಸಿದರು.
ಶಾಸಕರ ಬೆಂಬಲವಿಲ್ಲದ ಕಾರಣ ಬಿಜೆಪಿ ಶಿವಕುಮಾರ್‌ರನ್ನು ಕರೆದಿಲ್ಲ ಎಂಬ ಯತ್ನಾಳ್‌ರ ಹೇಳಿಕೆಗೆ, “ಕಸ, ಸಗಣಿಯ ಮೇಲೆ ಕಲ್ಲು ಹಾಕುವುದಕ್ಕೆ ನಾನು ಇಷ್ಟಪಡುವುದಿಲ್ಲ” ಎಂದು ತಿರುಗೇಟು ನೀಡಿದರು.