ಒಂದೇ ಕಡೆ ನೂರಾರು ಜಿಂಕೆಗಳು, ಹೊಲಕ್ಕೆ ನುಗ್ಗಿ ಸಾಲು ಸಾಲಾಗಿ ಬೆಳೆ ತಿನ್ನುತ್ತಾ ಬೆಳೆ ನಾಶದಿಂದ ರೈತರು ಬೇಸತ್ತಿದ್ದು, ಕೂಡಲೇ ರಾಜ್ಯ ಸರ್ಕಾರವೂ, ಅರಣ್ಯ ಇಲಾಖೆಗೆ ಜಿಂಕೆ ವನ ನಿರ್ಮಿಸಲು ಸೂಚಿಸಬೇಕೆಂದು ರೈತ ಸಂಘ ಸರ್ಕಾರವನ್ನು ಆಗ್ರಹಿಸಿದೆ.
ಜಿಂಕೆಗಳು ಹೊಲಕ್ಕೆ ಬರದಂತೆ ತಡೆಯಲು ಹೊಲದ ಸುತ್ತಲೂ ಕಟ್ಟಿಗೆ ಕಂಬವನ್ನು ಹಾಕಿ ಪ್ಲಾಸ್ಟಿಕ್ ದಾರದಿಂದ ಬಲೆ ಹಾಕಿ ಹರಸಾಹಸ ಪಟ್ಟರು ಜಿಂಕೆಗಳು ರೈತರ ಜಮೀನಿಗೆ ನುಗ್ಗಿ ಬೆಳೆ ನಾಶಪಡಿಸುತ್ತಲೇ ಇರುವುದರಿಂದ ರೈತ ಸಂಪೂರ್ಣ ಕಂಗಾಲಾಗಿದ್ದಾನೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಬಳಿ ಕೃಷ್ಣಮೃಗ, ಚಿಂಕಾರ, ಲಾಂಗ್ ಚಾಪರ್ ಮೂರು ಜಾತಿಯ ಜಿಂಕೆಗಳ ಕಾಟಕ್ಕೆ ರೈತರ ಬೆಳೆ ನಾಶವಾಗಿದ್ದು, ಬೆಳೆ ಉಳಿಸಿಕೊಳ್ಳಲು ಹಗಲಿರುಳೂ ಎನ್ನದೇ ರೈತರು ಹೊಲದಲ್ಲಿ ಗುಡಿಸಲು ಹಾಕಿಕೊಂಡು ಕಣ್ಣಿಗೆ ನಿದ್ದೆ ಇಲ್ಲದೆ, ನಿದ್ದೆಗೆಟ್ಟು ಜಿಂಕೆಗಳಿಂದ ಬೆಳೆಯನ್ನು ಕಾಯಲು ಹೊಲದಲ್ಲಿಯೇ ಕಾಲ ಕಳೆಯುತ್ತಿದ್ದಾರೆ.
ಈ ಜಿಂಕೆ ಹಾಗೂ ಕಾಡು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸುವಂತೆ ರೈತರು 2009 ರಿಂದ ಇಲ್ಲಿಯವರೆಗೂ ಅರಣ್ಯ ಇಲಾಖೆ ಸೇರಿದಂತೆ ರಾಜ್ಯದ ಮುಖ್ಯಮಂತ್ರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಸಚಿವರು, ಸಂಸದರೆಲ್ಲರಿಗೂ ಮನವಿ ಸಲ್ಲಿಸುತ್ತಾ ಬಂದರೂ ಕೂಡ ಉತ್ತರ ಕರ್ನಾಟಕದ ಏಂಟು ಜಿಲ್ಲೆಯ ಜನಪ್ರತಿನಿಧಿಗಳು, ಸಚಿವರು, ಸಂಸದರು ಯಾವುದಾದರೂ ಒಂದು ಜಿಲ್ಲೆಯಲ್ಲಿ ಜಿಂಕೆ ವನ ನಿರ್ಮಾಣ ಮಾಡಲು ಮುಂದಾಗಲಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ತಮ್ಮ ಅಳಲನ್ನು ವ್ಯಕ್ತಪಡಿಸಿದರು.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರು 2010ರಲ್ಲಿ ಬೆಂಗಳೂರು ಅಧಿವೇಶನದಲ್ಲಿ ಜಿಂಕೆ ವನಕ್ಕಾಗಾಗಿ ಐವತ್ತು ಲಕ್ಷ ರೂಪಾಯಿ ಅನುದಾನ ಘೋಷಿಸಲಾಗಿತ್ತು ಆದರೆ ಐವತ್ತು ಲಕ್ಷ ರೂಪಾಯಿ ಅನುದಾನ ಏನಾಯಿತು ಎಂದು ರೈತರ ಪ್ರಶ್ನೆವಾಗಿದೆ ಎಂದು ಗುಡೇನಕಟ್ಟಿ ಗ್ರಾಮದ ರೈತ ಮುಖಂಡರಾದ ಬಸವರಾಜ ಯೋಗಪ್ಪನವರು ತಿಳಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಜಿಂಕೆ ಕಾಟಕ್ಕೆ ಒಳಗಾದ ಕೊಪ್ಪಳ, ರಾಯಚೂರು, ಗದಗ, ಹಾವೇರಿ, ಧಾರವಾಡ, ಬಾಗಲಕೋಟೆ, ಬಿಜಾಪುರ, ಯಾದಗಿರಿ ಎಂಟು ಜಿಲ್ಲೆಗಳ ರೈತರು ಸರ್ಕಾರಕ್ಕೆ ಮನವಿ ಸಲ್ಲಿಸಿದರು ಕೂಡ ಯಾವ ಜಿಲ್ಲೆಯಲ್ಲಿಯೂ ಜಿಂಕೆ ವನ ಭಾಗ್ಯ ಸಿಕ್ಕಿಲ್ಲ ಎಂದರೆ, ಇಂತಹ ಜನಪ್ರತಿನಿಧಿಗಳ ನಿರ್ಲಕ್ಷದಿಂದ ಎಂಟು ಜಿಲ್ಲೆಯ ರೈತರಿಂದ ಮತ ಹಾಕಿ ಆರಿಸಿ ತಂದಿರುವಂತ ರೈತರನ್ನೆ ಕಡೆಗಣಿಸಿರುವ ಇಂತಹ ಜನಪ್ರತಿನಿಧಿಗಳು, ಸಂಸದರು, ಎಂಟು ಜಿಲ್ಲೆಯಲ್ಲಿ ಇದ್ದರೂ ಕೂಡ ಸತ್ತಂತೆ ಎಂದು ಸ್ಥಳೀಯ ರೈತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವೂ ರೈತರ ಬೆಳೆಗೆ ಪರಿಹಾರ ಕೊಡಬೇಕು, ಇಲ್ಲವಾದರೆ ಜಿಲ್ಲೆಯಲ್ಲಿ ಒಂದು ಜಿಂಕೆ ವನ ನಿರ್ಮಾಣ ಮಾಡಬೇಕು, ಇಲ್ಲವಾದ್ಲಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ, ರೈತರಾದ ಶರಣಪ್ಪ ತಿಮ್ಮಾಪುರ ಸರ್ಕಾರವನ್ನು ಆಗ್ರಹಿಸಿದರು.