ಬೆಂಗಳೂರು: ಜಿಎಸ್‌ಟಿ ಕಡಿತ ವಿಷಯದಲ್ಲಿ ಕಾಂಗ್ರೆಸ್ ದ್ವಿಮುಖ ನೀತಿಯನ್ನು ಅನುಸರಿಸುತ್ತಿದ್ದು, ಈಗ ಅವರ ನಿಜವಾದ ಬಣ್ಣ ಬಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜನರಿಗೆ ತೆರಿಗೆ ಕಡಿಮೆಯಾಗಬೇಕು ಎಂದು ಬಾಹ್ಯವಾಗಿ ಹೇಳುತ್ತದೆಯಾದರೂ, ತಮ್ಮ ಪಾಲಿನ ತೆರಿಗೆಯನ್ನು ಬಿಟ್ಟುಕೊಡಲು ಸಿದ್ಧವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರ ಮೇಲೆ ಒಂದು ಲಕ್ಷ ಕೋಟಿ ರೂ. ಹೆಚ್ಚಿನ ತೆರಿಗೆ ಹೊರೆ ಹಾಕಿದ್ದಾರೆ, ಇದರಿಂದ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದು ಟೀಕಿಸಿದರು.
ಮೋದಿ ಸರ್ಕಾರದ ಜಿಎಸ್‌ಟಿ ಕಡಿತದಿಂದ ಜನರಿಗೆ ಲಾಭ
ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಸಾಮಾನ್ಯ ಜನರ ಅನುಕೂಲಕ್ಕಾಗಿ ಜಿಎಸ್‌ಟಿ ದರ ಕಡಿತಗೊಳಿಸಿದೆ. ಇದರಿಂದ ಗ್ರಾಹಕರ ಬಳಕೆ ಹೆಚ್ಚಾಗಿ, ತೆರಿಗೆ ಸಂಗ್ರಹವೂ ಏರಿಕೆಯಾಗುತ್ತದೆ. ಈ ಕಡಿತದ ಲಾಭ ನೇರವಾಗಿ ಜನರಿಗೆ ತಲುಪುತ್ತಿದೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಷಯದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಜಿಎಸ್‌ಟಿ ಕಡಿತವು ದೇಶದ ಆರ್ಥಿಕ ದಿಕ್ಸೂಚಿಯನ್ನು ಬದಲಿಸುವುದರ ಜೊತೆಗೆ, ನಿರೀಕ್ಷೆಗಿಂತ ಮುಂಚೆಯೇ ಭಾರತವು ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಬ್ಯಾಲೆಟ್ ಪೇಪರ್‌ಗೆ ಸಿದ್ದರಾಮಯ್ಯ ತೀರ್ಮಾನ: 25 ವರ್ಷ ಹಿಂದಕ್ಕೆ!
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಸಲು ರಾಜ್ಯ ಸರ್ಕಾರ ತೀರ್ಮಾನಿಸಿರುವ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಬ್ಯಾಲೆಟ್ ಪೇಪರ್ ಇದ್ದಾಗ ಸಾಕಷ್ಟು ಅಕ್ರಮಗಳು ನಡೆದಿವೆ. ರಾಜ್ಯ ಚುನಾವಣಾ ಆಯುಕ್ತರು ಈ ಇತಿಹಾಸವನ್ನು ಪರಿಶೀಲಿಸಬೇಕು. ಸಿದ್ದರಾಮಯ್ಯ ಇವಿಎಂ ಮೂಲಕ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಈಗ ಬೆಂಗಳೂರಿನ ಜನರಿಗೆ ಬ್ಯಾಲೆಟ್ ಪೇಪರ್ ಬೇಕು ಎಂದು ಹೇಳುತ್ತಿದ್ದಾರೆ. ಇದು ಜನರನ್ನು 25 ವರ್ಷ ಹಿಂದಕ್ಕೆ ಕೊಂಡೊಯ್ಯುವ ತೀರ್ಮಾನವಾಗಿದ್ದು, ಇದು ಕೇವಲ ತಮ್ಮ ನಾಯಕರನ್ನು ಮೆಚ್ಚಿಸಲು ತೆಗೆದುಕೊಂಡ ನಿರ್ಧಾರ ಎಂದು ಆರೋಪಿಸಿದರು.
ಅಲ್ಪಸಂಖ್ಯಾತರಿಗೆ ಮೀಸಲಾತಿ ಸಂವಿಧಾನದಲ್ಲಿ ಇಲ್ಲ
ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರ ಹೆಸರಿನಲ್ಲಿ ಕೇವಲ ಮುಸ್ಲಿಮರಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿಗೆ ಯಾವುದೇ ಅವಕಾಶವಿಲ್ಲ. ಕಾಂಗ್ರೆಸ್ ಸರ್ಕಾರ ತಮ್ಮ ಅನುಕೂಲಕ್ಕೆ ತಕ್ಕಂತೆ ಸಂವಿಧಾನವನ್ನು ಬಳಸಿಕೊಳ್ಳುತ್ತಿದೆ. ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ಎಲ್ಲಿದೆ ಎಂದು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.
ರೈತರ ಆತ್ಮಹತ್ಯೆ ವರದಿಯಲ್ಲಿ ಸರ್ಕಾರದ ಕುತಂತ್ರ
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಕಡಿಮೆಯಾಗಿದೆ ಎಂಬ ವರದಿಗೆ ಸಂಬಂಧಿಸಿದಂತೆ, ರೈತರ ಆತ್ಮಹತ್ಯೆಗಳು ರಾಜ್ಯದಲ್ಲಿ ಇನ್ನೂ ನಡೆಯುತ್ತಿವೆ. ಆದರೆ, ಸರ್ಕಾರ ಇಂತಹ ಪ್ರಕರಣಗಳನ್ನು ದಾಖಲಿಸದೇ, ಆತ್ಮಹತ್ಯೆ ಸಂಖ್ಯೆ ಕಡಿಮೆಯಾಗಿದೆ ಎಂದು ತೋರಿಸುತ್ತಿದೆ ಎಂದು ಬೊಮ್ಮಾಯಿ ಆರೋಪಿಸಿದರು.