ನವದೆಹಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಸುಧಾರಣೆಗಳನ್ನು ಜಾರಿಗೆ ತಂದು, ರಾಷ್ಟ್ರದ ಜನತೆಗೆ ಐತಿಹಾಸಿಕ ದೀಪಾವಳಿ ಉಡುಗೊರೆಯನ್ನು ನೀಡಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕುಮಾರಸ್ವಾಮಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗೆ ಅನುಮೋದನೆ ನೀಡಲಾಗಿದೆ. ಈ ನಿರ್ಧಾರವು ಜನರ ಜೀವನವನ್ನು ಸರಳಗೊಳಿಸುವ ಜೊತೆಗೆ #ಆತ್ಮನಿರ್ಭರಭಾರತ್ ಗುರಿಯನ್ನು ಬಲಪಡಿಸುವ ಪರಿವರ್ತನಾತ್ಮಕ ಕ್ರಮವಾಗಿದೆ ಎಂದು ಬಣ್ಣಿಸಿದ್ದಾರೆ.
ಹೊಸ ಜಿಎಸ್‌ಟಿ ಸುಧಾರಣೆಯು ತೆರಿಗೆ ಸ್ಲ್ಯಾಬ್‌ಗಳನ್ನು ಕೇವಲ ಎರಡಕ್ಕೆ ಸೀಮಿತಗೊಳಿಸಿದ್ದು, 5% ಮತ್ತು 18% ದರಗಳನ್ನು ಒಳಗೊಂಡಿದೆ. ಇದರಿಂದ ದೈನಂದಿನ ಅಗತ್ಯ ವಸ್ತುಗಳು, ಆರೋಗ್ಯ ರಕ್ಷಣೆ, ಶಿಕ್ಷಣ, ಕೃಷಿ, ಮತ್ತು ವಾಹನಗಳು ಕೈಗೆಟುಕುವ ದರದಲ್ಲಿ ಲಭ್ಯವಾಗಲಿವೆ. ಇದಲ್ಲದೆ, ಈ ಸುಧಾರಣೆಯಿಂದ ಉದ್ಯಮಗಳು ಮತ್ತು ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳ (MSME) ಗಳಿಗೆ ಗಣನೀಯ ಉತ್ತೇಜನ ಸಿಗಲಿದೆ ಎಂದು ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸುಧಾರಣೆಯು ಜಿಎಸ್‌ಟಿ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಿ, ಭಾರತದ ಪ್ರತಿ ಮನೆಗೂ ಸಂತೋಷ ತರುವ ಜನಕೇಂದ್ರಿತ ಕ್ರಮವಾಗಿದೆ ಎಂದು ಕುಮಾರಸ್ವಾಮಿ ಒತ್ತಿ ಹೇಳಿದ್ದಾರೆ.