300 ಕೋಟಿ ರೂ. ಅನುದಾನ, ಗಡಿ ಗೋಪುರ ನಿರ್ಮಾಣಕ್ಕೂ ಯೋಜನೆ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳ ನೂತನ ಕಚೇರಿಗಳಿಗೆ ನವೆಂಬರ್ 1 ರಂದು ಭೂಮಿಪೂಜೆ ನೆರವೇರಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಜೊತೆಗೆ, ಪಾಲಿಕೆ ಗಡಿಗಳಲ್ಲಿ ಗಡಿ ಗೋಪುರಗಳನ್ನು ನಿರ್ಮಿಸುವ ಯೋಜನೆಯನ್ನೂ ಅವರು ಘೋಷಿಸಿದರು.
ಜಿಬಿಎ ಕಚೇರಿಯ ನಾಮಫಲಕ ಅನಾವರಣಗೊಳಿಸಿದ ಬಳಿಕ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, “ಪಾಲಿಕೆ ವ್ಯಾಪ್ತಿಯ ರಸ್ತೆ ಸುಧಾರಣೆ ಮತ್ತು ಆಡಳಿತಾತ್ಮಕ ಕಾರ್ಯಕ್ಷಮತೆಗಾಗಿ 500 ಎಂಜಿನಿಯರ್‌ಗಳ ನೇಮಕಕ್ಕೆ ಅನುಮೋದನೆ ನೀಡಲಾಗಿದೆ. ಈಗಿನ 198 ವಾರ್ಡ್‌ಗಳ ಸಂಖ್ಯೆಯನ್ನು 500ಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಾಲಿಕೆಗಳ ಆಡಳಿತ ವೆಚ್ಚ, ಸಂಬಳ, ಮತ್ತು ನಿವೃತ್ತಿ ವೇತನಕ್ಕಾಗಿ ಬಿಬಿಎಂಪಿಯಿಂದ 300 ಕೋಟಿ ರೂ. ಬಿಡುಗಡೆಯಾಗಲಿದೆ” ಎಂದರು.
ವಿನ್ಯಾಸಕ್ಕೆ ಸಾರ್ವಜನಿಕರಿಂದ ಸಲಹೆ, 5 ಲಕ್ಷ ರೂ. ಬಹುಮಾನ
ಕಚೇರಿಗಳ ವಿನ್ಯಾಸದ ಬಗ್ಗೆ ಮಾತನಾಡಿದ ಶಿವಕುಮಾರ್, “ನಾಗರಿಕರು ಮತ್ತು ವಾಸ್ತುಶಿಲ್ಪಿಗಳು ಪಾಲಿಕೆ ಕಚೇರಿಗಳ ವಿನ್ಯಾಸದ ಸಲಹೆಗಳನ್ನು ನೀಡಬಹುದು. ಅತ್ಯುತ್ತಮ ಮೂರು ರಿಂದ ಐದು ವಿನ್ಯಾಸಗಳನ್ನು ಆಯ್ಕೆ ಮಾಡಿ, ಗೆದ್ದವರಿಗೆ 5 ಲಕ್ಷ ರೂ. ಬಹುಮಾನ ನೀಡಲಾಗುವುದು” ಎಂದರು.
“ಪ್ರತಿ ಪಾಲಿಕೆಯಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು, ಒಬ್ಬ ಕೆಎಎಸ್ ಅಧಿಕಾರಿ, ಇಬ್ಬರು ಮುಖ್ಯ ಎಂಜಿನಿಯರ್‌ಗಳು, ಮತ್ತು ಅಗತ್ಯ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಬೆಂಗಳೂರಿನ ಜನರಿಗೆ ಉತ್ತಮ ಆಡಳಿತ ಒದಗಿಸಿ, ಸರ್ಕಾರವನ್ನು ಅವರ ಬಾಗಿಲಿಗೆ ಕೊಂಡೊಯ್ಯುವ ಗುರಿಯಿದೆ. ರಸ್ತೆ, ಚರಂಡಿ, ಮತ್ತು ಇತರ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಲಾಗುವುದು” ಎಂದು ಅವರು ಹೇಳಿದರು.
ಹೊಸ ಪ್ರದೇಶಗಳ ವಿಲೀನಕ್ಕೆ ಚುನಾವಣೆಯ ನಂತರ ಚಿಂತನೆ
ಬೆಂಗಳೂರಿಗೆ ಸಂಲಗ್ನವಾದ ಸ್ಥಳೀಯ ಸಂಸ್ಥೆಗಳನ್ನು ಜಿಬಿಎ ವ್ಯಾಪ್ತಿಗೆ ಸೇರಿಸುವ ಬಗ್ಗೆ ಕೇಳಿದಾಗ, “ಈಗಲೇ ವಿಲೀನಗೊಳಿಸಿದರೆ, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಪಾಲಿಕೆ ಸದಸ್ಯರೆಂದು ಪರಿಗಣಿಸಬೇಕಾಗುತ್ತದೆ. ಮೊದಲು ಈಗಿನ ಪಾಲಿಕೆಗಳಿಗೆ ಚುನಾವಣೆ ನಡೆದ ನಂತರ, ಇತರ ಪ್ರದೇಶಗಳ ವಿಲೀನದ ಬಗ್ಗೆ ಚಿಂತಿಸಲಾಗುವುದು” ಎಂದರು.
ಆಯುಕ್ತರಿಗೆ ಜನಸಂಪರ್ಕದ ಜವಾಬ್ದಾರಿ
ನೂತನ ಆಯುಕ್ತರ ಕಾರ್ಯಗಳ ಬಗ್ಗೆ ಶಿವಕುಮಾರ್, “ಆಯುಕ್ತರು ಜನರೊಂದಿಗೆ ಸಂಪರ್ಕದಲ್ಲಿದ್ದು ಕೆಲಸ ಮಾಡಬೇಕು. ಫುಟ್‌ಪಾತ್, ಕುಡಿಯುವ ನೀರು, ರಸ್ತೆಗಳ ಸಮಸ್ಯೆಗಳನ್ನು ಪರಿಶೀಲಿಸಲಾಗುತ್ತಿದೆ. ದಿನಕ್ಕೆ 17-18 ಗಂಟೆ ಕೆಲಸ ಮಾಡಬೇಕಾಗುತ್ತದೆ. ಈ ಕಾರಣಕ್ಕೆ ಹಿರಿಯ ಮತ್ತು ಯುವ ಅಧಿಕಾರಿಗಳನ್ನು ನಿಯೋಜಿಸಲಾಗಿದೆ” ಎಂದರು.
ಮಹೇಶ್ವರ್ ರಾವ್‌ಗೆ ಜಿಬಿಎ ಆಯುಕ್ತರ ಜವಾಬ್ದಾರಿ
“ಮಹೇಶ್ವರ್ ರಾವ್ ಅವರು ಚುನಾವಣೆಯವರೆಗೆ ಜಿಬಿಎ ಮುಖ್ಯ ಆಯುಕ್ತರಾಗಿ ಮತ್ತು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ರಾಧಿಕಾರದ ಸಮಿತಿಗೆ 75 ಸದಸ್ಯರನ್ನು ನೇಮಕ ಮಾಡಲಾಗಿದೆ” ಎಂದು ಶಿವಕುಮಾರ್ ತಿಳಿಸಿದರು.
ಗ್ರೇಟರ್ ಬೆಂಗಳೂರು ಹೆಸರಿಗೆ ಆಕ್ಷೇಪ: ಬದಲಾವಣೆಗೆ ಸಿದ್ಧ
ಗ್ರೇಟರ್ ಬೆಂಗಳೂರು ಎಂಬ ಇಂಗ್ಲಿಷ್ ಹೆಸರಿಗೆ ಶಾಸಕ ಅಶ್ವಥನಾರಾಯಣ ಆಕ್ಷೇಪ ವ್ಯಕ್ತಪಡಿಸಿದ ಬಗ್ಗೆ, “ಅವರಿಂದ ಸೂಕ್ತ ಹೆಸರಿಗೆ ಸಲಹೆ ಕೇಳುತ್ತೇನೆ. ಮಾತೃಭಾಷೆಯನ್ನು ಕಡೆಗಣಿಸುವ ಪ್ರಶ್ನೆಯಿಲ್ಲ. ಒಳ್ಳೆಯ ಕನ್ನಡ ಪದ ಸಿಕ್ಕರೆ ಹೆಸರು ಬದಲಾಯಿಸಲಾಗುವುದು” ಎಂದರು.
ಬೆಂಗಳೂರಿನ ಸಮಸ್ಯೆಗಳಿಗೆ ಕ್ರಮಬದ್ಧ ಪರಿಹಾರ
“ಬೆಂಗಳೂರಿನ ಸಮಸ್ಯೆಗಳು ಒಂದೇ ದಿನದಲ್ಲಿ ಬಗೆಹರಿಯಲು ಸಾಧ್ಯವಿಲ್ಲ. ಆದರೆ, ಕುಡಿಯುವ ನೀರು, ರಸ್ತೆ ಗುಂಡಿಗಳು, ಮತ್ತು ಸಂಚಾರ ದಟ್ಟಣೆಯ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಪರಿಹರಿಸಲಾಗುವುದು” ಎಂದು ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಜಿಬಿಎಯಿಂದ ಬೆಂಗಳೂರು ಅಭಿವೃದ್ಧಿಗೆ ಒತ್ತು
ಜಿಬಿಎಯಿಂದ ಬೆಂಗಳೂರು ಅಭಿವೃದ್ಧಿ ಸಾಧ್ಯವೇ ಎಂದು ಕೇಳಿದಾಗ, “ಖಂಡಿತವಾಗಿಯೂ ಸಾಧ್ಯ. ಸಾರ್ವಜನಿಕರು ಪಾಲಿಕೆಗಳೊಂದಿಗೆ ಸಹಕರಿಸಬೇಕು. ಆಸ್ತಿ ಘೋಷಣೆ ಮತ್ತು ತೆರಿಗೆ ಪಾವತಿಯಲ್ಲಿ ಪ್ರಾಮಾಣಿಕತೆ ತೋರಿದರೆ ಪಾರದರ್ಶಕ ಆಡಳಿತ ಸಾಧ್ಯವಾಗುತ್ತದೆ” ಎಂದರು.
ಜಿಬಿಎ ಕಾರ್ಯನಿರ್ವಹಣೆ
“ಬಿಬಿಎಂಪಿ ಕೇವಲ ಮೇಲ್ವಿಚಾರಣೆಯ ಜವಾಬ್ದಾರಿ ವಹಿಸಿಕೊಳ್ಳಲಿದೆ. ರಸ್ತೆ, ಚರಂಡಿ, ಮತ್ತು ಇತರ ಕಾರ್ಯಗಳು ಪಾಲಿಕೆಗಳ ವ್ಯಾಪ್ತಿಗೆ ಬರಲಿವೆ” ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.