ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆಯ ಭೂ ಸಂತ್ರಸ್ತ ರೈತರಿಗೆ ಜಮೀನಿನ ಮಾನದಂಡದ ಆಧಾರದ ಮೇಲೆ ಪ್ರತಿ ಎಕರೆಗೆ ₹1.50 ಕೋಟಿಯಿಂದ ₹2.50 ಕೋಟಿವರೆಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ, ಜಿಬಿಐಟಿ ಯೋಜನೆಯ ಲೋಗೋ ಮತ್ತು ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿ, ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “2013ರ ಕಾಯ್ದೆಯನ್ವಯ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ನೀಡಲಾಗುವುದು. ಜಿಲ್ಲಾಡಳಿತವು ಕಾನೂನು ಮಾನದಂಡಗಳ ಆಧಾರದ ಮೇಲೆ ಮುಖ್ಯರಸ್ತೆ ಬಳಿಯ ಜಮೀನು ಮತ್ತು ಒಳಭಾಗದ ಜಮೀನಿಗೆ ದರ ನಿಗದಿಪಡಿಸಲಿದೆ. ರೈತರಿಗೆ ಯಾವುದೇ ಅನ್ಯಾಯವಾಗದಂತೆ ರಾಜ್ಯದ ಯಾವುದೇ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೈಗೊಳ್ಳದಿರುವ ಐತಿಹಾಸಿಕ ತೀರ್ಮಾನವನ್ನು ಈ ಯೋಜನೆಯಲ್ಲಿ ಕೈಗೊಂಡಿದ್ದೇವೆ” ಎಂದರು.
50:50 ಭೂಮಿ ಹಂಚಿಕೆ, ಜೀವನೋಪಾಯಕ್ಕೆ ಅನುದಾನ:
ಪರಿಹಾರವಾಗಿ ಹಣ ಪಡೆಯದ ರೈತರಿಗೆ 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ಭೂಮಿಯನ್ನು ನೀಡಲಾಗುವುದು. ಅಂತಿಮ ಅಧಿಸೂಚನೆಯಿಂದ ಪರಿಹಾರ ವಿತರಣೆಯವರೆಗೆ ರೈತರ ಜೀವನೋಪಾಯಕ್ಕಾಗಿ ವಾರ್ಷಿಕ ಅನುದಾನವನ್ನು ಒದಗಿಸಲಾಗುವುದು. ಖುಷ್ಕಿ ಭೂಮಾಲೀಕರಿಗೆ ₹30,000, ತರಿ ಭೂಮಾಲೀಕರಿಗೆ ₹40,000, ಭಾಗಾಯ್ತು ಭೂಮಾಲೀಕರಿಗೆ ₹50,000 ವಾರ್ಷಿಕ ಅನುದಾನ ನೀಡಲಾಗುವುದು. ಭೂರಹಿತ ಕಾರ್ಮಿಕರಿಗೆ ಮತ್ತು ಭೂಮಿಯ ದಾಖಲೆ ಇಲ್ಲದವರಿಗೆ ಒಂದು ನಿವೇಶನ ಹಾಗೂ ₹25,000 ವಾರ್ಷಿಕ ಅನುದಾನ ಒದಗಿಸಲಾಗುವುದು. ಇದರ ಜೊತೆಗೆ ಆದಾಯ ತೆರಿಗೆ ವಿನಾಯಿತಿ, ಮುದ್ರಾಂಕ ಶುಲ್ಕ ವಿನಾಯಿತಿಯಂತಹ ಸೌಲಭ್ಯಗಳನ್ನೂ ನೀಡಲಾಗುವುದು. ರೈತರು ದಾಖಲೆ ಸಮೇತ ಅರ್ಜಿ ಸಲ್ಲಿಸಿದರೆ, ಮೂರು ದಿನಗಳಲ್ಲಿ ಪರಿಹಾರ ವಿತರಣೆ ಆರಂಭವಾಗಲಿದೆ ಎಂದು ಶಿವಕುಮಾರ್ ತಿಳಿಸಿದರು.
ದೇಶದ ಮೊದಲ ಎಐ ಆಧಾರಿತ ನಗರ:
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯ ಮೂಲಕ ದೇಶದ ಮೊದಲ ಇಂಟೆಗ್ರೇಟೆಡ್ ಕೃತಕ ಬುದ್ಧಿಮತ್ತೆ (ಎಐ) ನಗರವನ್ನು ನಿರ್ಮಿಸಲಾಗುವುದು. 9,000 ಎಕರೆಯಲ್ಲಿ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದು ಭವಿಷ್ಯದಲ್ಲಿ ಬೆಂಗಳೂರಿನ ಕೇಂದ್ರ ವ್ಯವಹಾರ ಜಿಲ್ಲೆಯಾಗಲಿದೆ. ‘ಕೆಲಸ-ವಾಸ-ಉಲ್ಲಾಸ’ (Work-Live-Play) ಮಾದರಿಯಲ್ಲಿ ಈ ನಗರವನ್ನು ವಿನ್ಯಾಸಗೊಳಿಸಲಾಗಿದೆ. 2,000 ಎಕರೆಗೂ ಹೆಚ್ಚಿನ ಪ್ರದೇಶವನ್ನು ಎಐ ಆಧಾರಿತ ಉದ್ದಿಮೆಗಳಿಗಾಗಿ ಜಾಗತಿಕ ಹೂಡಿಕೆದಾರರಿಗೆ ಮೀಸಲಿಡಲಾಗುವುದು.
ಶೂನ್ಯ ಟ್ರಾಫಿಕ್ ಜಾಮ್ ಗುರಿ:
ಈ ನಗರವನ್ನು ಶೂನ್ಯ ಟ್ರಾಫಿಕ್ ಜಾಮ್ ಪಟ್ಟಣವಾಗಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. 300 ಮೀಟರ್ ಅಗಲದ ಬಿಸಿನೆಸ್ ಕಾರಿಡಾರ್ ಮೂಲಕ ಎಸ್‌ಟಿಆರ್‌ಆರ್ ರಸ್ತೆ (9 ಕಿ.ಮೀ), ನೈಸ್ ರಸ್ತೆ (11 ಕಿ.ಮೀ), ಮೈಸೂರು-ಬೆಂಗಳೂರು ಹೆದ್ದಾರಿ (5 ಕಿ.ಮೀ), ಮತ್ತು ಬೆಂಗಳೂರು-ದಿಂಡಗಲ್ ಹೆದ್ದಾರಿ (2.2 ಕಿ.ಮೀ) ಗಳಿಗೆ ಸಂಪರ್ಕ ಕಲ್ಪಿಸಲಾಗುವುದು. 70 ಮೀಟರ್ ಅಗಲದ ಮುಖ್ಯ ರಸ್ತೆಗಳು, ವರ್ತುಲ ರಸ್ತೆಗಳು, ಮತ್ತು ಎಕ್ಸ್‌ಪ್ರೆಸ್‌ವೇ ಲಿಂಕ್‌ಗಳೊಂದಿಗೆ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸಲಾಗುವುದು. ಭವಿಷ್ಯದಲ್ಲಿ ಮೆಟ್ರೋ ಸಂಪರ್ಕವನ್ನು ವಿಸ್ತರಿಸುವ ಯೋಜನೆಯೂ ಇದೆ.
ಸ್ಥಳೀಯರಿಗೆ ಉದ್ಯೋಗ ಆದ್ಯತೆ:
ಈ ಯೋಜನೆಯಿಂದ ಎಐ, ಐಟಿ, ಸ್ಟಾರ್ಟ್‌ಅಪ್, ಮತ್ತು ಸೇವಾ ಕ್ಷೇತ್ರಗಳಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಸ್ಥಳೀಯ ಯುವಕರಿಗೆ ಆದ್ಯತೆ ನೀಡಲು ‘ಸ್ಥಳೀಯ ಪ್ರಥಮ ಉದ್ಯೋಗ ನೀತಿ’ ರೂಪಿಸಲಾಗುವುದು. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕೌಶಲ ಕೇಂದ್ರಗಳನ್ನು ಸ್ಥಾಪಿಸಿ, ಸ್ಥಳೀಯರನ್ನು ಎಐ ಚಾಲಿತ ಉದ್ಯಮಗಳಿಗೆ ಸಿದ್ಧಗೊಳಿಸಲಾಗುವುದು.
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ:
ಈ ಯೋಜನೆಯಲ್ಲಿ 26 ಹಳ್ಳಿಗಳನ್ನು ನಗರ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ವಾಸಸ್ಥಳಗಳನ್ನು ಭೂಸ್ವಾಧೀನ ಮಾಡದೆ ಉಳಿಸಿಕೊಳ್ಳಲಾಗುವುದು. ಶಾಲೆಗಳು, 50 ಮೀಟರ್ ರಿಂಗ್ ರಸ್ತೆ, ಕರ್ನಾಟಕ ಪಬ್ಲಿಕ್ ಶಾಲೆ, ಆಧುನಿಕ ಆಸ್ಪತ್ರೆ, ಭೂಗತ ವಿದ್ಯುತ್ ಕೇಬಲ್, ಒಳಚರಂಡಿ ವ್ಯವಸ್ಥೆ, ಆಟದ ಮೈದಾನ, ಧಾರ್ಮಿಕ ಸ್ಥಳಗಳ ಅಭಿವೃದ್ಧಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುವುದು. 1,100 ಎಕರೆಯಲ್ಲಿ ಉದ್ಯಾನವನಗಳು ಮತ್ತು ಮೈದಾನಗಳನ್ನು ನಿರ್ಮಿಸಿ, ಹಸಿರು ಮತ್ತು ಸುಸ್ಥಿರ ನಗರವನ್ನಾಗಿ ರೂಪಿಸಲಾಗುವುದು.
ಆರ್ಥಿಕ ವ್ಯವಸ್ಥೆ:
ಈ ಯೋಜನೆಗಾಗಿ 9 ಗ್ರಾಮಗಳ 8,493 ಎಕರೆ ಭೂಮಿಯನ್ನು ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ 750 ಎಕರೆ ಸರ್ಕಾರಿ ಭೂಮಿ, 6,731 ಎಕರೆ ಖಾಸಗಿ ಭೂಮಿ, ಮತ್ತು 1,012 ಎಕರೆ ಜಲಮೂಲ ಪ್ರದೇಶವಾಗಿದೆ. ಬಿಎಂಆರ್‌ಡಿಎ ಮೂಲಕ ₹2,950 ಕೋಟಿ ಮತ್ತು ಕರ್ನಾಟಕ ಸರ್ಕಾರದ ಶ್ಯೂರಿಟಿಯೊಂದಿಗೆ ₹17,500 ಕೋಟಿ ಹಣಕಾಸು ಸಂಗ್ರಹಿಸಲಾಗುವುದು. ₹20,000 ಕೋಟಿ ಆರ್ಥಿಕ ಸಂಪನ್ಮೂಲ ಸಂಗ್ರಹವಾದ ನಂತರ ಭೂಸ್ವಾಧೀನ ಮತ್ತು ಪರಿಹಾರ ವಿತರಣೆ ಆರಂಭವಾಗಲಿದೆ.
ಕಾಲಾನುಕ್ರಮ:
ಈ ಯೋಜನೆಯು ಹಿಂದಿನ ಬಿಡದಿ ಸ್ಮಾರ್ಟ್ ಸಿಟಿ ಯೋಜನೆಯಿಂದ ವಿಕಸನಗೊಂಡಿದೆ. 2006ರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಿಪಿಪಿ ಮಾದರಿಯಲ್ಲಿ ಟೌನ್‌ಶಿಪ್ ಯೋಜನೆಗೆ ಚಾಲನೆ ನೀಡಿದ್ದರು. 2023ರಲ್ಲಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಇದನ್ನು ಮಹಾ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಿ ಮೇಲ್ದರ್ಜೆಗೆ ಏರಿಸಲಾಯಿತು. 2025ರ ಫೆಬ್ರವರಿಯಲ್ಲಿ ಸಚಿವ ಸಂಪುಟದಲ್ಲಿ ಈ ಯೋಜನೆಗೆ ಅನುಮೋದನೆ ದೊರೆತಿದ್ದು, ಮಾರ್ಚ್ 2025ರಲ್ಲಿ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ.
ರೈತರಿಗೆ ಮನವಿ:
78% ರೈತರು ಭೂಮಿ ನೀಡಲು ಸಮ್ಮತಿಸಿದ್ದಾರೆ ಎಂದು ತಿಳಿಸಿದ ಶಿವಕುಮಾರ್, 18% ರೈತರು ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. “ನಾನು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ರೈತರಿಗೆ ಕೈಮುಗಿದು ಕ್ಷಮೆ ಕೇಳುತ್ತೇನೆ, ಆದರೆ ಈ ಯೋಜನೆ ಐತಿಹಾಸಿಕವಾಗಿದೆ ಮತ್ತು ಭವಿಷ್ಯದ ಜನರಿಗೆ ಇದರಿಂದ ಲಾಭವಾಗಲಿದೆ” ಎಂದರು.
ಕನಕಪುರದಲ್ಲಿ ಮೆಡಿಕಲ್ ಕಾಲೇಜು:
ರಾಮನಗರ ಮತ್ತು ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕನಕಪುರದಲ್ಲಿ 25 ಎಕರೆ ಜಾಗಕ್ಕೆ ₹60 ಕೋಟಿ ಮೀಸಲಿಡಲಾಗಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಉಳಿದ ಹಣಕಾಸಿನ ಬಗ್ಗೆ ಚರ್ಚಿಸಲಾಗುವುದು ಎಂದು ಶಿವಕುಮಾರ್ ತಿಳಿಸಿದರು.
“ನಮ್ಮ ಜನ ತಮ್ಮ ಊರಿನಲ್ಲೇ ಬೆಂಗಳೂರಿನಂತಹ ಸೌಲಭ್ಯಗಳನ್ನು ಕಾಣಬೇಕು. ಈ ಯೋಜನೆಯಿಂದ ರಾಮನಗರ, ಕನಕಪುರ, ಚನ್ನಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಉದ್ಯೋಗ, ಶಿಕ್ಷಣ, ಮತ್ತು ಆರೋಗ್ಯ ಸೌಲಭ್ಯಗಳು ದೊರೆಯಲಿವೆ” ಎಂದು ಶಿವಕುಮಾರ್ ಹೇಳಿದರು.