ರಾಯಚೂರು: ತುಂಗಭದ್ರಾ ಜಲಾಶಯದಿಂದ ರೈತರಿಗೆ ಎರಡನೇ ಬೆಳೆಗೆ ನೀರು ಬಿಡದ ಸರ್ಕಾರದ ವೈಫಲ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, “ನೀರು ಕೊಡಿ, ಇಲ್ಲದಿದ್ದರೆ ಪರಿಹಾರ ಕೊಡಿ ಅಥವಾ ರೈತರ ಸಾಲ ಮನ್ನಾ ಮಾಡಿ” ಎಂದು ಆಗ್ರಹಿಸಿದ್ದಾರೆ. ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ಟಿಬಿ ಡ್ಯಾಂ ಮುಂದೆ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಿಂಧನೂರಿನಲ್ಲಿ ನಡೆದ ಪಾದಯಾತ್ರೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ರೈತರ ಗೋಳು ಕೇಳಿಸುತ್ತಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಗೇಟ್ ದುರಸ್ತಿಗೆ ಗುತ್ತಿಗೆದಾರರಿಗೆ ಹಣವಿಲ್ಲದ ಸರ್ಕಾರ
ತುಂಗಭದ್ರಾ ಡ್ಯಾಂನ ೧೯ನೇ ಗೇಟ್ ದುರಸ್ತಿಗೆ ೧.೮ ಕೋಟಿ ರೂ. ಖರ್ಚಾದರೂ ಒಂದು ವರ್ಷ ಕಳೆದರು ಗುತ್ತಿಗೆದಾರರಿಗೆ ಹಣ ನೀಡದ ಸರ್ಕಾರ, ಈಗ ೩೨ ಗೇಟ್‌ಗಳ ದುರಸ್ತಿಗೆ ೫೨ ಕೋಟಿ ರೂ. ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ೧೧ ಕೋಟಿ ರೂ. ಖರ್ಚಾಗಿದ್ದರೂ ಗುತ್ತಿಗೆದಾರರಿಗೆ ಒಂದು ರೂಪಾಯಿಯೂ ನೀಡಿಲ್ಲ ಎಂದು ನಿಖಿಲ್ ಆರೋಪಿಸಿದರು.
ಎರಡನೇ ಬೆಳೆಗೆ ನೀರು ಬಿಡದೇ ರೈತರಿಗೆ ೧೦-೧೨ ಕೋಟಿ ನಷ್ಟ
“ಸರ್ಕಾರದ ತಪ್ಪಿನಿಂದ ಎರಡನೇ ಬೆಳೆಗೆ ನೀರು ಬಿಡದೇ ಇರುವುದರಿಂದ ಎಕರೆಗೆ ೨೫ ಸಾವಿರ ರೂ. ಪರಿಹಾರ ನೀಡಬೇಕು. ರೈತರಿಗೆ ಒಟ್ಟಾರೆ ೧೦ ರಿಂದ ೧೨ ಕೋಟಿ ರೂ. ನಷ್ಟವಾಗಿದೆ. ಇದಕ್ಕೆ ಸಂಪೂರ್ಣ ಹೊಣೆ ಸರ್ಕಾರದ್ದೇ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಭತ್ತಕ್ಕೆ ಕ್ವಿಂಟಲ್‌ಗೆ ೫೦೦ ರೂ. ಪ್ರೋತ್ಸಾಹ ಧನ ಕೊಡಿ
ಈ ಬಾರಿ ಭತ್ತಕ್ಕೆ ವೈರಸ್ ಕಾಟದಿಂದ ಇಳುವರಿ ಗಣನೀಯವಾಗಿ ಕಡಿಮೆಯಾಗಿದೆ. ಕೇಂದ್ರ ಸರ್ಕಾರದಿಂದ ಬಂದ ನಿಧಿಯಲ್ಲಿ ರೈತರಿಗೆ ಒಂದು ರೂಪಾಯಿಯೂ ನೀಡದ ಸರ್ಕಾರ, ಪಕ್ಕದ ತೆಲಂಗಾಣ ಮಾದರಿಯಂತೆ ಪ್ರತಿ ಕ್ವಿಂಟಲ್ ಭತ್ತಕ್ಕೆ ೫೦೦ ರೂ. ಪ್ರೋತ್ಸಾಹ ಧನ ನೀಡಬೇಕು ಎಂದು ನಿಖಿಲ್ ಒತ್ತಾಯಿಸಿದರು.
೧೦ ದಿನಗಳ ಗಡುವು – ಇಲ್ಲವೇ ಉಗ್ರ ಹೋರಾಟ
“ನಮ್ಮ ಎಲ್ಲ ಬೇಡಿಕೆಗಳಿಗೆ ೧೦ ದಿನಗಳ ಗಡುವು ನೀಡುತ್ತೇವೆ. ಇಂದಿನಿಂದ ಹೋರಾಟ ಆರಂಭವಾಗಿದೆ. ರೈತರಿಗೆ ನ್ಯಾಯ ಸಿಗುವವರೆಗೂ ಜೆಡಿಎಸ್ ಹೋರಾಟ ಮುಂದುವರೆಯಲಿದೆ. ಈ ಹೋರಾಟವನ್ನು ತಾರ್ಕಿಕ ಹಂತಕ್ಕೆ ಒಯ್ಯುತ್ತೇವೆ. ನ್ಯಾಯ ಸಿಗುವವರೆಗೂ ರೈತರ ಜೊತೆಗೇ ನಿಲ್ಲುತ್ತೇನೆ” ಎಂದು ನಿಖಿಲ್ ಕುಮಾರಸ್ವಾಮಿ ಘೋಷಿಸಿದರು.











