ಬೆಂಗಳೂರು: ಡಾ. ಎಚ್. ನರಸಿಂಹಯ್ಯ ವಿಜ್ಞಾನ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಅಗತ್ಯ ನೆರವು ನೀಡಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ತಿಳಿಸಿದರು.
ಶನಿವಾರ ಡಾ. ಎಚ್. ನರಸಿಂಹಯ್ಯ ಉಪಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ ಅವರು ಕಾಂಗ್ರೆಸ್ ಸರ್ಕಾರ ಈಗಾಗಲೇ ಬಜೆಟ್ ಅಧಿವೇಶನದಲ್ಲಿ ಡಾ. ಎಚ್. ನರಸಿಂಹಯ್ಯ ವಿಜ್ಞಾನ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ ರಚನೆಗೆ ಮಸೂದೆ ಮಂಡಿಸಿ, ಉಭಯ ಸದನದಲ್ಲಿ ಅಂಗೀಕರಿಸಿದೆ. ಇದಕ್ಕೆ ರಾಜ್ಯಪಾಲರು ಸಹಿ ಹಾಕುವ ಮೂಲಕ ವಿದೇಯಕ ಅಂಗಿಕರಿಸಲಾಗಿದೆ. ಶೀಘ್ರದಲ್ಲೇ ಸುಮಾರು 136 ಎಕರೆ ಜಾಗದಲ್ಲಿ ಪ್ರಾಧಿಕಾರ ರಚನೆಯಾಗಲಿದೆ. ಈ ಪ್ರಾಧಿಕಾರ ರಚನೆಯಿಂದ ಈ ಭಾಗದ ಸರ್ವತೋಮುಖ ಅಭಿವೃದ್ಧಿಯ ಜೊತೆಗೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದರು.
ಮಾನವ ಕಲ್ಯಾಣಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸುವುದು, ಸ್ಥಳೀಯ ಸಂಸ್ಕೃತಿ ಪರಂಪರೆಯನ್ನು ರಕ್ಷಿಸುವುದು, ಸಮಾಜ ಅಧ್ಯಯನಗಳು, ಕಲೆ ಮತ್ತು ಸಂಸ್ಕೃತಿ ಒಳಗೊಂಡಂತೆ ಇತರೆ ಶೈಕ್ಷಣಿಕ ನವೀನಾತ್ಮಕ ಚಟುವಟಿಕೆಗಳಿಗಾಗಿ ವೇದಿಕೆಯನ್ನು ಕಲ್ಪಿಸುವುದು ಈ ಪ್ರಾಧಿಕಾರ ಮುಖ್ಯ ಉದ್ದೇಶವಾಗಿರಲಿದೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶಿವಶಂಕರ್ ರೆಡ್ಡಿ ಅವರು ಉಪಸ್ಥಿತರಿದ್ದರು, ಸಚಿವರು ವಿಜ್ಞಾನ ಕೇಂದ್ರ ನಿರ್ಮಾಣ ಹಾಗೂ ಪ್ರಾಧಿಕಾರ ರಚನೆಯಲ್ಲಿ ಶಿವಶಂಕರ್ ರೆಡ್ಡಿ ಅವರ ಪಾತ್ರವನ್ನು ಸ್ಮರಿಸಿದರು.
ಮುಂದಿನ ದಿನಗಳಲ್ಲಿ ಸರ್ಕಾರ ಪ್ರಾಧಿಕಾರದ ಅಭಿವೃದ್ಧಿಗೆ ಆಗತ್ಯ ಸಹಕಾರ ನೀಡಿ, ಪ್ರಾಧಿಕಾರವನ್ನು ರಾಜ್ಯದಲ್ಲೇ ಮಾದರಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.