ಬೆಂಗಳೂರು: ಭಾರತದ ಸುಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ, ಪದ್ಮವಿಭೂಷಣ ಸಮ್ಮಾನಿತ, ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಾಜಿ ಅಧ್ಯಕ್ಷ ಡಾ. ಕಸ್ತೂರಿರಂಗನ್ (24.10.1940 – 25.04.2025) ಅವರು ಶುಕ್ರವಾರ ನಿಧನರಾದರು. ಅವರ ದೇಹಾವಸಾನದಿಂದ ಭಾರತದ ರಾಷ್ಟ್ರಜೀವನದಲ್ಲಿ ಒಂದು ದೇದೀಪ್ಯಮಾನ ನಕ್ಷತ್ರ ಕಾಣೆಯಾಗಿದೆ.
ಡಾ. ಕಸ್ತೂರಿರಂಗನ್ ಅವರು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ವೈಶ್ವಿಕ ಮಟ್ಟದ ದಿಗ್ಗಜರಾಗಿದ್ದರು. ಇಸ್ರೋದ ಅಧ್ಯಕ್ಷರಾಗಿ ಅವರು ಭಾರತದ ಬಾಹ್ಯಾಕಾಶ ಸಂಶೋಧನೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಅವರ ನಾಯಕತ್ವದಲ್ಲಿ ಇಸ್ರೋ ಹಲವಾರು ಐತಿಹಾಸಿಕ ಸಾಧನೆಗಳನ್ನು ಮಾಡಿತು. ಬಾಹ್ಯಾಕಾಶ ಕ್ಷೇತ್ರದ ಜೊತೆಗೆ, ರಾಜ್ಯಸಭಾ ಸದಸ್ಯರಾಗಿ, ಯೋಜನಾ ಆಯೋಗದ ಸದಸ್ಯರಾಗಿ, ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ರೂಪಕರ್ತರಾಗಿ ಅವರು ರಾಷ್ಟ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಡಾ. ರಂಗನ್ ಅವರ ಕೊಡುಗೆ ಐತಿಹಾಸಿಕವಾಗಿದೆ. ವಿಜ್ಞಾನಿ, ನೀತಿ ನಿರೂಪಕ, ಶಿಕ್ಷಣತಜ್ಞ, ಮತ್ತು ಪರಿಸರವಾದಿಯಾಗಿ ಅವರು ಬಹುಮುಖಿ ಪಾತ್ರಗಳಲ್ಲಿ ರಾಷ್ಟ್ರದ ಸೇವೆಗೈದರು. ಉದಾತ್ತ ಮಾನವತಾವಾದಿಯಾಗಿ ಮತ್ತು ಸಂವೇದನಾಶೀಲ ವ್ಯಕ್ತಿಯಾಗಿ ಎಲ್ಲರ ಮನಸ್ಸಿನಲ್ಲಿ ಅವರು ಸ್ಥಾನ ಪಡೆದಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಪರವಾಗಿ ಒಂದು ಶೋಕ ಸಂದೇಶದಲ್ಲಿ, “ಡಾ. ಕಸ್ತೂರಿರಂಗನ್ ಅವರ ನಿಧನದಿಂದ ಭಾರತ ಕಳೆದುಕೊಂಡಿರುವುದು ಒಬ್ಬ ಮಹಾನ್ ದೇಶಭಕ್ತನನ್ನು. ಅವರ ಕುಟುಂಬದವರಿಗೆ, ಪ್ರೀತಿಪಾತ್ರರಿಗೆ ನಮ್ಮ ಹೃತ್ಪೂರ್ವಕ ಸಂತಾಪಗಳು. ಈ ಮಹಾನ್ ವಿಜ್ಞಾನಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಾ, ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ,” ಎಂದು ತಿಳಿಸಿದೆ.
ಡಾ. ಕಸ್ತೂರಿರಂಗನ್ ಅವರ ಆದರ್ಶಗಳು ಮತ್ತು ಕೊಡುಗೆಗಳು ಭಾರತದ ಯುವ ಜನಾಂಗಕ್ಕೆ ಸದಾ ಪ್ರೇರಣೆಯಾಗಿ ಉಳಿಯಲಿವೆ. ಓಂ ಶಾಂತಿ.