ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಜನಸಂಘದ ಸ್ಥಾಪಕ ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ಕನಸನ್ನು ನನಸಾಗಿಸಿದ್ದಾರೆ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಇದು ಪ್ರತಿಯೊಬ್ಬ ರಾಷ್ಟ್ರೀಯವಾದಿ ಭಾರತೀಯನಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ತಿಳಿಸಿದರು.
ಡಾ. ಮುಖರ್ಜಿಯವರ ಜನ್ಮದಿನದ ಅಂಗವಾಗಿ ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರು ಡಾ. ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ಜೀವನವೇ ಒಂದು ಸಂದೇಶವಾಗಿದೆ. ಅವರ ಚಿಂತನೆಗಳಿಂದ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತ ಧೈರ್ಯವಂತರಾಗಿ, ‘ದೇಶ ಮೊದಲು’ ಎಂಬ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ದೇಶದ ಏಕತೆ, ಸಮಗ್ರತೆ ಮತ್ತು ಸಾಂಸ್ಕೃತಿಕ ಹಿರಿಮೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶ್ರೇಷ್ಠ ರಾಷ್ಟ್ರೀಯ ನಾಯಕರಾದ ಡಾ. ಮುಖರ್ಜಿಯವರು ಭಾರತೀಯ ಜನಸಂಘದ ಸ್ಥಾಪಕರಾಗಿ ಬಿಜೆಪಿಗೆ ಸೈದ್ಧಾಂತಿಕ ಅಡಿಪಾಯ ಹಾಕಿದವರು. 370ನೇ ವಿಧಿಯನ್ನು ವಿರೋಧಿಸಿ, ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಒಗ್ಗೂಡಿಸಲು ಗಟ್ಟಿಯಾಗಿ ನಿಂತು, ತಮ್ಮ ಪ್ರಾಣವನ್ನೇ ಸಮರ್ಪಿಸಿದ ಧೀಮಂತ ನಾಯಕರಾಗಿದ್ದಾರೆ,” ಎಂದು ಅವರು ನೆನಪಿಸಿದರು.
370ನೇ ವಿಧಿಯನ್ನು ಓಲೈಕೆಗಾಗಿ ಸೇರಿಸಲಾಯಿತು: ಛಲವಾದಿ ನಾರಾಯಣಸ್ವಾಮಿ
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, “ಡಾ. ಮುಖರ್ಜಿಯವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಜೊತೆಗೆ ಕೆಲಸ ಮಾಡಿದವರು. ಕಾಂಗ್ರೆಸ್ಸೇತರ ನಾಯಕರಾದ ಇವರು ಮೊದಲ ಸರ್ಕಾರದಲ್ಲಿ ಮಂತ್ರಿಗಳಾಗಿದ್ದರು. ಆದರೆ, ಸಂವಿಧಾನ ರಚನೆಯ ಸಂದರ್ಭದಲ್ಲಿ ಡಾ. ಅಂಬೇಡ್ಕರ್ 370ನೇ ವಿಧಿಯನ್ನು ಸೇರಿಸಿರಲಿಲ್ಲ. ಆದರೆ, ಜವಾಹರಲಾಲ್ ನೆಹರು ತಮ್ಮ ಓಲೈಕೆ ರಾಜಕಾರಣಕ್ಕಾಗಿ ಈ ವಿಧಿಯನ್ನು ಸಂವಿಧಾನಕ್ಕೆ ಸೇರಿಸಿದರು,” ಎಂದು ಆರೋಪಿಸಿದರು.
“370ನೇ ವಿಧಿಯನ್ನು ಸೇರಿಸಿದ ದಿನದಿಂದಲೇ ಡಾ. ಮುಖರ್ಜಿಯವರು ಅದರ ವಿರುದ್ಧ ಹೋರಾಟ ಆರಂಭಿಸಿದ್ದರು. ದೇಶದ ಏಕತೆಗಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಇವರು ರಾಜಕೀಯ ನಾಯಕರಷ್ಟೇ ಅಲ್ಲ, ಶಿಕ್ಷಣ ತಜ್ಞರು, ಹೋರಾಟಗಾರರು, ಸಮಾಜ ಸೇವಕರಾಗಿ ದೇಶಕ್ಕೆ ಕೊಡುಗೆ ನೀಡಿದವರು. ಕ್ವಿಟ್ ಇಂಡಿಯ ಚಳವಳಿಯ ರುವಾರಿಯಾಗಿ ಬ್ರಿಟಿಷರ ವಿರುದ್ಧ ಬೃಹತ್ ಹೋರಾಟವನ್ನು ರೂಪಿಸಿದ್ದರು,” ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಕಾಂಗ್ರೆಸ್‌ನವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡಿಲ್ಲ ಎಂದು ಆರೋಪಿಸುತ್ತಾರೆ ಎಂದು ಟೀಕಿಸಿದ ಅವರು, “ಕಾಂಗ್ರೆಸ್‌ಗೆ ಸ್ವಾತಂತ್ರ್ಯವು ತಮ್ಮಿಂದ ಮಾತ್ರ ಬಂದಿದೆ ಎಂಬ ಭಾವನೆ ಇದೆ. ಆದರೆ, ಡಾ. ಮುಖರ್ಜಿಯವರಂತಹ ನಾಯಕರು ದೇಶದ ಏಕತೆ ಮತ್ತು ಸಾಂಸ್ಕೃತಿಕ ಮೌಲ್ಯಗಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ಸಹಕಾರ್ಯದರ್ಶಿ ವಿಶ್ವನಾಥ ಅಣಜಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.