ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆರೋಪಗಳು ಸುಳ್ಳು ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ. ಅನಿತಾ ಕುಮಾರಸ್ವಾಮಿ ಜಮೀನು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರೆ, ಆ ಜಮೀನನ್ನು ರೈತರಿಗೆ ದಾನ ಮಾಡುವುದಾಗಿ ಅವರು ಸವಾಲು ಹಾಕಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ನಿಖಿಲ್, ಡಿಕೆ ಶಿವಕುಮಾರ್‌ಗೆ ತೀಕ್ಷ್ಣವಾಗಿ ತಿರುಗೇಟು ನೀಡಿದರು.
“ಸುಳ್ಳು ನಿಮ್ಮ ಮನೆ ದೇವರು”:
ನಿಖಿಲ್ ಕುಮಾರಸ್ವಾಮಿ, ಡಿಕೆ ಶಿವಕುಮಾರ್‌ರನ್ನು ಉದ್ದೇಶಿಸಿ, “ಗಾಳಿಯಲ್ಲಿ ಗುಂಡು ಹೊಡೆಯುವುದು ನಿಮ್ಮ ಅಭ್ಯಾಸ. ವಿಷಯ ತಿಳಿದುಕೊಂಡು ಮಾತನಾಡಿ. ರಾಮನಗರದ ರೈತರ ಮುಂದೆ ಅಪಪ್ರಚಾರ ಮಾಡಿದರೆ, ನಾವು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಅನಿತಾ ಕುಮಾರಸ್ವಾಮಿ ಜಮೀನು ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರೆ, ಆ ಜಮೀನನ್ನು ರೈತರಿಗೆ ಮತ್ತು ಬಡವರಿಗೆ ದಾನ ಮಾಡುತ್ತೇವೆ,” ಎಂದು ಗುಡುಗಿದರು. “ನಾವು ಶಿಕ್ಷಣ ಸಂಸ್ಥೆಗಳನ್ನೋ, ದೊಡ್ಡ ಮಾಲ್‌ಗಳನ್ನೋ ಕಟ್ಟಿಲ್ಲ. ಕಂಡ ಕಂಡವರ ಜಮೀನಿಗೆ ಹೋಗಿಲ್ಲ. ರಾಮನಗರದಲ್ಲಿ ಬಂದು ಈ ಆರೋಪಗಳಿಗೆ ಉತ್ತರ ಕೊಡಿ,” ಎಂದು ಸವಾಲು ಹಾಕಿದರು.
ರಿಯಲ್ ಎಸ್ಟೇಟ್ ದಂಧೆ ಆರೋಪ:
ಡಿಕೆ ಶಿವಕುಮಾರ್‌ರನ್ನು ಟೀಕಿಸಿದ ನಿಖಿಲ್, “ರಿಯಲ್ ಎಸ್ಟೇಟ್ ದಂಧೆಗಾಗಿ ಬಿಬಿಎಂಪಿಯನ್ನು ಪಂಚಾಯತ್ ಮಾಡಿದ್ದಾರೆ. ಸಿಲಿಕಾನ್ ಸಿಟಿಯನ್ನು ಗಾರ್ಬೇಜ್ ಸಿಟಿಯಾಗಿ ಪರಿವರ್ತಿಸಿದ್ದಾರೆ. ಮೊದಲು ನಗರದ ಕಸ ಎತ್ತಿ, ಆಮೇಲೆ ಜಿಬಿಎ ಮಾಡಿ ಬೆಂಗಳೂರು ಅಭಿವೃದ್ಧಿಯಾಗುತ್ತದೆಯೇ ಎಂದು ಕೇಳಿ,” ಎಂದು ಕಿಡಿಕಾರಿದರು. ಅಲ್ಲದೆ, “ರಾಮನಗರ ಜಿಲ್ಲೆಯಲ್ಲಿ ನಾಲ್ಕು ಕಾಂಗ್ರೆಸ್ ಶಾಸಕರಿದ್ದರೂ, ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ರೈತರ ಕಷ್ಟ ಕೇಳಲು ಯಾರೂ ಹೋಗಿಲ್ಲ. ರೈತರ ಮನೆಗೆ ಭೇಟಿ ನೀಡಿದವರಾರು?” ಎಂದು ಪ್ರಶ್ನಿಸಿದರು.
ಕೇತಗನಹಳ್ಳಿ ಜಮೀನು ವಿವಾದ:
ಕೇತಗನಹಳ್ಳಿ ಜಮೀನು ವಿವಾದದ ಬಗ್ಗೆ ಮಾತನಾಡಿದ ನಿಖಿಲ್, “20 ವರ್ಷಗಳಿಂದ ಜಮೀನು ಖರೀದಿಸಿದ್ದೇವೆ. ಬನ್ನಿಗಿರಿ ಮತ್ತು ಹೊಸೂರು ಬಿಡದಿಯ ಜಮೀನು ಕೃಷಿಗೆ ಸಂಬಂಧಿಸಿದ್ದು. ದೇವೇಗೌಡರು ಮತ್ತು ಕುಮಾರಸ್ವಾಮಿ ಮೂಲತಃ ರೈತರು. ಈ ಜಮೀನಿನ ಮೇಲೆ ಎಸ್‌ಐಟಿ ರಚಿಸಿದ್ದೀರಿ, ಕೊನೆಗೆ ಸುಪ್ರೀಂ ಕೋರ್ಟ್ಸ್ ಏನಾಯಿತು?” ಎಂದು ಡಿಕೆಶಿಯವರನ್ನು ತರಾಟಿದರು.
ಸಿದ್ದರಾಮಯ್ಯಗೆ ಸವಾಲು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ “ಜೆಡಿಎಸ್ ಎರಡು ಸೀಟುಗಳಿಗಿಂತ ಹೆಚ್ಚು ಗೆಲ್ಲಲಾರದು” ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ನಿಖಿಲ್, “ತಾಕತ್ತು ಇದ್ದರೆ ಪ್ರಾದೇಶಿಕ ಪಕ್ಷ ಕಟ್ಟಿ ಒಂದು ಸ್ಥಾನವಾದರೂ ಗೆದ್ದು ತೋರಿಸಿ. ಜೆಡಿಎಸ್‌ನ ಶಕ್ತಿಯನ್ನು ಮುಂದಿನ ಚುನಾವಣೆಯಲ್ಲಿ ತೋರಿಸುತ್ತೇವೆ,” ಎಂದು ತಿರುಗೇಟು ನೀಡಿದರು.
ಟನೆಲ್ ರೋಡ್ ಕಾಮಗಾರಿ ವಿವಾದ:
ಡಿಕೆ ಶಿವಕುಮಾರ್‌ರ ಟನೆಲ್ ರೋಡ್ ಯೋಜನೆಯನ್ನು ಟೀಕಿಸಿದ ನಿಖಿಲ್, “ಕಮೀಷನ್‌ಗಾಗಿ ಈ ಕಾಮಗಾರಿ ಮಾಡಲಾಗುತ್ತಿದೆ. ಟೋಲ್ ರಸ್ತೆಯಲ್ಲಿ ಶ್ರೀಮಂತರಷ್ಟೇ ಓಡಾಡಬೇಕೆ? ಈ ಯೋಜನೆ ಯಾರಿಗಾಗಿ? ಶ್ವೇತಪತ್ರ ಬಿಡುಗಡೆ ಮಾಡಿ, ಟೆಂಡರ್ ಯಾರಿಗೆ ಕೊಟ್ಟಿದ್ದೀರಿ ಎಂದು ಜನರಿಗೆ ತಿಳಿಸಿ,” ಎಂದು ಆಗ್ರಹಿಸಿದರು.
ಬ್ಯಾಲೆಟ್ ಪೇಪರ್ ವಿರೋಧ:
ಕಾಂಗ್ರೆಸ್ ಸರ್ಕಾರದ ಬ್ಯಾಲೆಟ್ ಪೇಪರ್ ಚುನಾವಣೆ ಪ್ರಸ್ತಾಪವನ್ನು ವಿರೋಧಿಸಿದ ನಿಖಿಲ್, “ಇವಿಎಂ ಮೂಲಕವೇ ಕಾಂಗ್ರೆಸ್ ಎರಡು ಬಾರಿ ಗೆದ್ದಿದೆ. ಇವಿಎಂ ಬೇಡವೆಂದರೆ ರಾಜೀನಾಮೆ ಕೊಟ್ಟು ಚುನಾವಣೆಗೆ ಬನ್ನಿ. ಕಾಂಗ್ರೆಸ್‌ನದ್ದು ಉದ್ಧಟತನದ ರಾಜಕಾರಣ,” ಎಂದು ಆರೋಪಿಸಿದರು.
ಯಶವಂತಪುರದಲ್ಲಿ ಅದ್ದೂರಿ ಸ್ವಾಗತ:
ಯಶವಂತಪುರದಲ್ಲಿ ಜೆಡಿಎಸ್ ಕಾರ್ಯಕ್ರಮಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿಯವರಿಗೆ ಸಾವಿರಾರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಕಿ, ಬೈಕ್ ರ್ಯಾಲಿಯೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು. ಬ್ಯಾಡರಹಳ್ಳಿ, ಗೊಲ್ಲರಹಟ್ಟಿ, ಕಡಬಗೆರೆ ಕ್ರಾಸ್, ಸೀಗೇಹಳ್ಳಿ ಗೇಟ್, ಚೆನ್ನೇನಹಳ್ಳಿ, ವನಗಾಗೇರಿಯ ರಸ್ತೆಗಳಲ್ಲಿ ರೋಡ್ ಶೋ ನಡೆಸಲಾಯಿತು. ಪಟಾಕಿಗಳು, ಹೂವಿನ ಹಾರಗಳೊಂದಿಗೆ ಜನರು ಜೆಡಿಎಸ್‌ಗೆ ಜೈಕಾರ ಕೂಗಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಎಚ್.ಕೆ. ಕುಮಾರಸ್ವಾಮಿ, ಮಾಜಿ ಶಾಸಕ ಅನ್ನಧಾನಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಶರವಣ, ವಿವೇಕಾನಂದ, ರಮೇಶ್ ಗೌಡ, ಗೊವಿಂದರಾಜು, ಹನಮಂತೇಗೌಡ ಸೇರಿದಂತೆ ಅನೇಕ ಮುಖಂಡರು ಮತ್ತು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.