ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಬಳಿಕ ಮಾಗಡಿ ಶಾಸಕ ಎ. ಬಾಲಕೃಷ್ಣ ಸಂಚಲನ ಹೇಳಿಕೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ “ಕೂಲಿ ಯಾವಾಗ ಸಿಗುತ್ತದೆ?” ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿರುವ ಅವರು, ಎಲ್ಲವೂ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದಿದ್ದಾರೆ.
“ಇಂದು ಬೆಳಗ್ಗೆ ಡಿಕೆ ಶಿವಕುಮಾರ್ ಅವರೊಂದಿಗೆ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಸಿದ್ದೇವೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಇಬ್ಬರೂ ಇದ್ದರು. ಮುಂದೆ ನಮ್ಮನ್ನು ಕರೆದು ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ” ಎಂದು ಬಾಲಕೃಷ್ಣ ತಿಳಿಸಿದ್ದಾರೆ.
“ಡಿಕೆಗೆ ಕೂಲಿ ಯಾವಾಗ ಸಿಗುತ್ತದೆ?” ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಕೂಲಿ ಕೇಳುತ್ತಿದ್ದೇವೆ. ಸ್ವಲ್ಪ ಸಮಯ ಹಿಡಿಯಬಹುದು. ಎಲ್ಲವನ್ನೂ ಹೈಕಮಾಂಡ್ ತೀರ್ಮಾನಿಸುತ್ತದೆ. ನಾವು ಎಲ್ಲವನ್ನೂ ಹೈಕಮಾಂಡ್‌ಗೆ ಬಿಟ್ಟಿದ್ದೇವೆ. ಸಚಿವ ಸ್ಥಾನ ಕೊಟ್ಟರೆ ಸ್ವೀಕರಿಸುತ್ತೇವೆ, ಇಲ್ಲದಿದ್ದರೆ ಶಾಸಕನಾಗಿಯೇ ಮುಂದುವರೆಯುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ, “ನಾವು ಮೊದಲಿನಿಂದಲೂ ಒಗ್ಗಟ್ಟಿನಿಂದ ನಡೆಯುತ್ತಿದ್ದೇವೆ. ಡಿ.ಕೆ. ಶಿವಕುಮಾರ್ ಯಾವಾಗ ಮುಖ್ಯಮಂತ್ರಿಯಾಗಬೇಕು ಎಂಬ ತೀರ್ಮಾನವನ್ನು ಸಿಎಂ ಮತ್ತು ಹೈಕಮಾಂಡ್ ಮಾಡಬೇಕು. ಆ ತೀರ್ಮಾನಕ್ಕೆ ಪ್ರಸ್ತುತ ಮುಖ್ಯಮಂತ್ರಿಗಳ ಅನುಮತಿ ಅತ್ಯಗತ್ಯ. ಅವರು ಒಪ್ಪಿದರೆ ಮಾತ್ರ ನಡೆಯುತ್ತದೆ” ಎಂದು ಬಾಲಕೃಷ್ಣ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಅವರ ಬೆಂಬಲಿಗರಾದ ಶಾಸಕರಲ್ಲಿ ಒಬ್ಬರಾದ ಬಾಲಕೃಷ್ಣ ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.











