ನವದೆಹಲಿ:ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಛೇಡಿಸುವ ಮೂಲಕ, “ಮೊದಲು ರಾಜ್ಯಕ್ಕೆ ದುಡ್ಡು ಕೊಡಿಸಲಿ, ಕೇವಲ ಖಾಲಿ ಮಾತನಾಡುವುದು ಬೇಡ” ಎಂದು ತಿರುಗೇಟು ನೀಡಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಟನಲ್ ರಸ್ತೆ ಯೋಜನೆ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಕುಮಾರಸ್ವಾಮಿ ಚರ್ಚೆ ನಡೆಸಿರುವುದು ಕ್ರೆಡಿಟ್ ವಾರ್‌ಗೆ ಕಾರಣವಾಗಿದೆಯೇ ಎಂದು ಮಾಧ್ಯಮದವರು ಕೇಳಿದಾಗ, “ಕುಮಾರಸ್ವಾಮಿ ಅವರ ಸಲಹೆಯನ್ನೂ, ನಿಮ್ಮ ಸಲಹೆಯನ್ನೂ ಸ್ವೀಕರಿಸುತ್ತೇನೆ” ಎಂದು ಹಾಸ್ಯದ ಮಾತಿನಲ್ಲಿ ಉತ್ತರಿಸಿದರು.
ಸಂಪುಟ ಬದಲಾವಣೆ ಚರ್ಚೆ ಇಲ್ಲ:
ಮುಖ್ಯಮಂತ್ರಿಯ ದೆಹಲಿ ಭೇಟಿಯ ಬಗ್ಗೆ ಕೇಳಿದಾಗ, ಶಿವಕುಮಾರ್, “ಸಂಪುಟ ಬದಲಾವಣೆ ಕುರಿತು ಯಾವುದೇ ಚರ್ಚೆ ಇಲ್ಲ. ನಾವು ರಾಜ್ಯದ ಅಭಿವೃದ್ಧಿ ವಿಷಯಗಳಿಗಾಗಿ ಬಂದಿದ್ದೇವೆ. ಬೆಂಗಳೂರಿನಲ್ಲಿ ರಸ್ತೆ ಅಗಲೀಕರಣಕ್ಕೆ ರಕ್ಷಣಾ ಇಲಾಖೆಯ ಭೂಮಿ ಬೇಕಾಗಿದೆ. ಜೊತೆಗೆ ದಸರಾ ವೇಳೆ ಚುಟುಕು ಏರ್ ಶೋ ಆಯೋಜನೆಗಾಗಿ ರಕ್ಷಣಾ ಸಚಿವರನ್ನು ಭೇಟಿಯಾಗಲು ಬಂದಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ನಾಲ್ಕು ಎಂಎಲ್‌ಸಿ ಸ್ಥಾನಗಳ ನಾಮನಿರ್ದೇಶನ:
ನಾಲ್ಕು ಎಂಎಲ್‌ಸಿ ಸ್ಥಾನಗಳ ನಾಮನಿರ್ದೇಶನದ ಬಗ್ಗೆ ಕೇಳಿದಾಗ, “ವಿಧಾನಸಭಾ ಅಧಿವೇಶನದ ಮೊದಲೇ ಇದು ಮುಗಿಯಲಿದೆ. ಮಾಧ್ಯಮದವರಿಗೂ ಒಂದು ಸ್ಥಾನ ನೀಡಲಾಗುವುದು” ಎಂದು ತಮಾಷೆಯಾಗಿ ಉತ್ತರಿಸಿದರು.
ಕಾಂಗ್ರೆಸ್ ಹಿರಿಯ ನಾಯಕರ ಭೇಟಿ:
ಕಾಂಗ್ರೆಸ್ ಹಿರಿಯ ನಾಯಕರಾದ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದೀರಾ ಎಂದು ಕೇಳಿದಾಗ, “ಸೋನಿಯಾ ಗಾಂಧಿಯವರನ್ನು ಭೇಟಿಯಾಗಿಲ್ಲ. ಹಿರಿಯ ನಾಯಕರ ಭೇಟಿಗೆ ಸಮಯ ಕೇಳಿದ್ದೇನೆ. ರಾಹುಲ್ ಗಾಂಧಿ ಅವರು ಪಾಟ್ನಾಕ್ಕೆ ತೆರಳಿದ್ದಾರೆ” ಎಂದು ತಿಳಿಸಿದರು.
ಬೀದರ್‌ನ ಎಫ್‌ಡಿಎ ಆತ್ಮಹತ್ಯೆ ಬೆದರಿಕೆ:
ಬೀದರ್‌ನ ಸಣ್ಣ ನೀರಾವರಿ ಇಲಾಖೆಯ ಎಫ್‌ಡಿಎ ಆತ್ಮಹತ್ಯೆ ಬೆದರಿಕೆ ವಿಡಿಯೋ ಬಿಡುಗಡೆ ಮಾಡಿರುವ ಬಗ್ಗೆ ಕೇಳಿದಾಗ, “ಈ ವಿಷಯ ನನಗೆ ಗೊತ್ತಿಲ್ಲ. ಮಾಹಿತಿ ತಿಳಿದ ಬಳಿಕ ಮಾತನಾಡುತ್ತೇನೆ” ಎಂದರು.
ರಾಹುಲ್ ಗಾಂಧಿ ಪ್ರತಿಭಟನೆಗೆ ತಡೆ:
ಪಾಟ್ನಾದಲ್ಲಿ ರಾಹುಲ್ ಗಾಂಧಿ ಅವರ ಪ್ರತಿಭಟನೆಯನ್ನು ತಡೆದಿರುವ ಬಗ್ಗೆ ಕೇಳಿದಾಗ, “ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸುವುದೇ ಈ ಸರ್ಕಾರದ ಕೆಲಸ. ರಾಹುಲ್ ಗಾಂಧಿ ಅವರು ಮತದಾರರ ಹಕ್ಕು ರಕ್ಷಣೆಗಾಗಿ ಹೋಗಿದ್ದಾರೆ” ಎಂದು ತಿರುಗೇಟು ನೀಡಿದರು.
ಮಹಾರಾಷ್ಟ್ರದ ಭಾಷಾ ಸಂಘರ್ಷ:
ಮಹಾರಾಷ್ಟ್ರದ ಭಾಷಾ ಸಂಘರ್ಷದ ಬಗ್ಗೆ ಕೇಳಿದಾಗ, “ಅದು ಆಯಾ ರಾಜ್ಯದ ವಿಷಯ. ನಾವು ಕನ್ನಡ ಮತ್ತು ಇಂಗ್ಲಿಷ್‌ಗೆ ಪ್ರಾಮುಖ್ಯತೆ ನೀಡುತ್ತೇವೆ” ಎಂದು ಸ್ಪಷ್ಟಪಡಿಸಿದರು.
ಕನ್ನಡ ಪರೀಕ್ಷೆ ಅಂಕ ಇಳಿಕೆ ವಿವಾದ:
ಕನ್ನಡ ಪರೀಕ್ಷೆಯ ಅಂಕವನ್ನು 125ರಿಂದ 100ಕ್ಕೆ ಇಳಿಸಿರುವ ಬಗ್ಗೆ ಬಿಜೆಪಿ ಮತ್ತು ಕೇಂದ್ರ ಸಚಿವ ಸೋಮಣ್ಣ ವಿರೋಧ ವ್ಯಕ್ತಪಡಿಸಿರುವ ಕುರಿತು ಕೇಳಿದಾಗ, “ನನ್ನ ಇಲಾಖೆಗೆ ಸಂಬಂಧಿಸಿದ ಪ್ರಶ್ನೆ ಇದ್ದರೆ ಉತ್ತರಿಸುತ್ತೇನೆ” ಎಂದು ತಾಕೀತು ಮಾಡಿದರು.
ಟನಲ್ ರಸ್ತೆ ಯೋಜನೆ:
ಟನಲ್ ರಸ್ತೆ ವಿಷಯದ ಬಗ್ಗೆ ಕೇಳಿದಾಗ, “ಎರಡು-ಮೂರು ದಿನಗಳಲ್ಲಿ ಗ್ಲೋಬಲ್ ಟೆಂಡರ್ ಕರೆಯಲಾಗುವುದು. ಟೋಲ್ ಇಲ್ಲದೆ ರಸ್ತೆ ನಿರ್ಮಾಣ ಸಾಧ್ಯವಿಲ್ಲ. ಏರ್‌ಪೋರ್ಟ್, ಮೈಸೂರು ರಸ್ತೆ, ನೈಸ್ ರಸ್ತೆಗಳಲ್ಲೂ ಟೋಲ್ ಇದೆ” ಎಂದು ವಿವರಿಸಿದರು.
ಕಾಂಗ್ರೆಸ್ ಸಂಘಟನೆಗೆ ಒತ್ತು:
ಕಾಂಗ್ರೆಸ್ ನಾಯಕ ಸುರ್ಜೇವಾಲ ಅವರ ಕರ್ನಾಟಕ ಭೇಟಿಯ ಬಗ್ಗೆ ಕೇಳಿದಾಗ, “ಮಲ್ಲಿಕಾರ್ಜುನ ಖರ್ಗೆ ಅವರು ಈ ವರ್ಷವನ್ನು ಪಕ್ಷ ಸಂಘಟನಾ ವರ್ಷವೆಂದು ಘೋಷಿಸಿದ್ದಾರೆ. ರಾಜ್ಯಾದ್ಯಂತ 100 ಕಾಂಗ್ರೆಸ್ ಕಚೇರಿಗಳ ನಿರ್ಮಾಣ ಯೋಜನೆ ಇದೆ. ಇದು ಕೇವಲ ಸಂಘಟನೆಗೆ ಸಂಬಂಧಿಸಿದ ವಿಷಯ, ರಾಜಕೀಯವಲ್ಲ” ಎಂದು ತಿಳಿಸಿದರು.