ಬೆಂಗಳೂರು: “ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ, ಜೀವ ಇರುವ ತನಕ ಕಾಂಗ್ರೆಸ್‌ನಲ್ಲೇ ಇರುತ್ತೇನೆ. ನನ್ನ ರಕ್ತ, ಜೀವ ಎಲ್ಲವೂ ಕಾಂಗ್ರೆಸ್‌ಗೆ ಮೀಸಲು. ಪಕ್ಷವನ್ನು ಮುನ್ನಡೆಸುವ ಆಧಾರಸ್ತಂಭವಾಗಿ ನಾನು ನಿಲ್ಲುತ್ತೇನೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಾಖಂಡಿತವಾಗಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಶಿವಕುಮಾರ್, ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ್ದರಿಂದ ಬಿಜೆಪಿ ಮತ್ತು ಆರ್‌ಎಸ್‌ಎಸ್ ಜೊತೆ ಕೈ ಜೋಡಿಸುವ ಬಗ್ಗೆ ಚರ್ಚೆಯಾಗುತ್ತಿದೆ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದರು. “ನಾನು ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಯಾವುದೇ ರೀತಿಯಲ್ಲೂ ಬಿಜೆಪಿ ಅಥವಾ ಆರ್‌ಎಸ್‌ಎಸ್ ಜೊತೆ ಕೈ ಜೋಡಿಸುವುದಿಲ್ಲ. ನಾನು ಕಾಂಗ್ರೆಸ್‌ನ ಒಬ್ಬ ನಿಷ್ಠಾವಂತ ಕಾರ್ಯಕರ್ತ. ಬಿಜೆಪಿ, ಜನತಾದಳ (ಎಸ್) ಮತ್ತು ಆರ್‌ಎಸ್‌ಎಸ್ ಬಗ್ಗೆ ಸಂಶೋಧನೆ ನಡೆಸಿದ್ದೇನೆ. ಅವರ ಇತಿಹಾಸ, ಕಾರ್ಯವೈಖರಿಯನ್ನು ಅಧ್ಯಯನ ಮಾಡಿದ್ದೇನೆ” ಎಂದರು.
ಆರ್‌ಎಸ್‌ಎಸ್‌ನ ಶಿಕ್ಷಣ ಸಂಸ್ಥೆಗಳಿಗೆ ಹೂಡಿಕೆ
ಶಿವಕುಮಾರ್ ಮಾತನ್ನು ಮುಂದುವರೆಸಿ, “ಆರ್‌ಎಸ್‌ಎಸ್ ರಾಜ್ಯದಾದ್ಯಂತ ತನ್ನ ಸಂಘಟನೆಯನ್ನು ಕಟ್ಟಿಕೊಂಡಿರುವ ರೀತಿಯನ್ನು ಅಧ್ಯಯನ ಮಾಡಿದ್ದೇನೆ. ಪ್ರತಿ ತಾಲ್ಲೂಕು, ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು, ಸಾಕಷ್ಟು ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ. ಮಕ್ಕಳನ್ನು ತಲುಪುವ ಕೆಲಸವನ್ನು ಅವರು ಮಾಡುತ್ತಿದ್ದಾರೆ” ಎಂದು ವಿವರಿಸಿದರು.
“ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಒಬ್ಬ ರಾಜಕೀಯ ವ್ಯಕ್ತಿಯಾಗಿ ನನ್ನ ಎದುರಾಳಿಗಳು, ಸ್ನೇಹಿತರು ಯಾರೆಂದು ತಿಳಿದಿರಬೇಕು. ಆದ್ದರಿಂದ ಆರ್‌ಎಸ್‌ಎಸ್‌ನ ಇತಿಹಾಸವನ್ನು ತಿಳಿದುಕೊಂಡಿದ್ದೇನೆ. ಕೆಲವು ಸಂಸ್ಥೆಗಳಲ್ಲಿ ಒಳ್ಳೆಯ ಗುಣಗಳಿರುತ್ತವೆ, ಅವುಗಳನ್ನು ಗಮನಿಸಬೇಕು. ನಾವು ದಿಟ್ಟವಾಗಿ, ನೇರವಾಗಿ ಮಾತನಾಡುತ್ತೇವೆ. ಒಳ್ಳೆಯ ಗುಣಗಳನ್ನು ಸ್ವೀಕರಿಸುವ ಮನಸ್ಸು ನಮ್ಮದು” ಎಂದು ತಿಳಿಸಿದರು.
ಮಾಧ್ಯಮದವರ ಬಗ್ಗೆ ಉದಾಹರಣೆ ನೀಡುತ್ತಾ, “ನಿಮ್ಮಲ್ಲೂ ಒಬ್ಬೊಬ್ಬರಿಗೆ ಒಂದೊಂದು ಗುಣವಿದೆ. ಕೆಲವರಿಗೆ ಜಾರಿಕೊಳ್ಳುವ ಗುಣ, ಕೆಲವರಿಗೆ ಒಳ್ಳೆಯ ಗುಣ. ಇವೆಲ್ಲವನ್ನೂ ಗಮನಿಸಬೇಕಲ್ಲವೇ?” ಎಂದು ಹಾಸ್ಯಚಟಾಕಿಯಿಂದ ಉತ್ತರಿಸಿದರು.
ಬಿಜೆಪಿಯ ಧರ್ಮಸ್ಥಳ ಯಾತ್ರೆ: ರಾಜಕೀಯ ತಂತ್ರ
ಬಿಜೆಪಿಯವರು ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡಿರುವ ಬಗ್ಗೆ ಕೇಳಿದಾಗ, “ಬಿಜೆಪಿಯವರದು ರಾಜಕೀಯ ತಂತ್ರ, ಒಂದು ಠುಸ್ ಗಿರಾಕಿ. ಹಿರಿಯ ಅಧಿಕಾರಿ ಮೊಹಾಂತಿ ನೇತೃತ್ವದ ತನಿಖಾ ತಂಡವು ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ” ಎಂದು ತಿರುಗೇಟು ನೀಡಿದರು.
ಆಧಾರ ರಹಿತ ಆರೋಪ ಸ್ವೀಕಾರಾರ್ಹವಲ್ಲ
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಆರೋಪ ಮಾಡಿದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಲಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿ, “ಆರೋಪ ಮಾಡಲು ಆತನ ಬಳಿ ಯಾವ ದಾಖಲೆ ಇದೆ? ರಾಜಕೀಯ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಆಧಾರ ರಹಿತವಾಗಿ ಯಾರ ಬಗ್ಗೆಯೂ ಮಾತನಾಡುವುದು ಸರಿಯಲ್ಲ. ಇಂದು ಅವರ ವಿರುದ್ಧ ಮಾತನಾಡಿದವರು, ನಾಳೆ ನಮ್ಮ ವಿರುದ್ಧವೂ ಮಾತನಾಡಬಹುದು. ಈ ಹಿಂದೆಯೂ ಮುಖ್ಯಮಂತ್ರಿಗಳ ವಿರುದ್ಧ, ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ರಾಜಕೀಯವಾಗಿ ಆರೋಪ ಮಾಡಬೇಕಾದರೆ, ಆಧಾರಗಳೊಂದಿಗೆ ಮಾಡಲಿ” ಎಂದು ಒತ್ತಿ ಹೇಳಿದರು.
ಧರ್ಮಸ್ಥಳದ ಹುಂಡಿ ಲೆಕ್ಕದ ಬಗ್ಗೆ
ಧರ್ಮಸ್ಥಳದಲ್ಲಿ ಸಂಗ್ರಹವಾಗುವ ಹುಂಡಿ ಹಣದ ಲೆಕ್ಕ ಕೊಡಬೇಕು ಎಂಬ ಸಮಾನ ಮನಸ್ಕ ವೇದಿಕೆಯ ಆಗ್ರಹಕ್ಕೆ ಪ್ರತಿಕ್ರಿಯಿಸಿ, “ಇದನ್ನು ಆದಾಯ ತೆರಿಗೆ ಇಲಾಖೆ ನೋಡಿಕೊಳ್ಳುತ್ತದೆ” ಎಂದು ಸಂಕ್ಷಿಪ್ತವಾಗಿ ಉತ್ತರಿಸಿದರು.