ಬೆಂಗಳೂರು: ರಾಜ್ಯ ಸರ್ಕಾರವು ತಂಬಾಕು ಉತ್ಪನ್ನಗಳ ಖರೀದಿಗೆ ಕಾನೂನುಬದ್ಧ ವಯಸ್ಸನ್ನು 18 ರಿಂದ 21 ವರ್ಷಗಳಿಗೆ ಏರಿಕೆ ಮಾಡಿದ್ದು, ಹುಕ್ಕಾ ಬಾರ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ಸಂಬಂಧ ‘ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ, ವ್ಯಾಪಾರ, ವಾಣಿಜ್ಯ ಉತ್ಪಾದನೆ, ಸರಬರಾಜು ಮತ್ತು ವಿತರಣೆ ನಿಯಂತ್ರಣ) ತಿದ್ದುಪಡಿ ಅಧಿನಿಯಮ-2024’ಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.
ಈ ಮಸೂದೆಯು 2024ರ ಫೆಬ್ರವರಿಯಲ್ಲಿ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿತ್ತು. 2003ರ ಕೇಂದ್ರ ಕಾಯ್ದೆಗೆ ಕರ್ನಾಟಕಕ್ಕೆ ಅನ್ವಯವಾಗುವಂತೆ ತಿದ್ದುಪಡಿ ತರಲಾಗಿದ್ದು, ಕೇಂದ್ರ ಕಾಯ್ದೆಗೆ ತಿದ್ದುಪಡಿಯಾಗಿರುವುದರಿಂದ ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಳುಹಿಸಲಾಗಿತ್ತು. ರಾಷ್ಟ್ರಪತಿಗಳ ಅಂಕಿತದೊಂದಿಗೆ ರಾಜ್ಯ ಸರ್ಕಾರವು ಈಗ ಅಧಿಸೂಚನೆ ಹೊರಡಿಸಿದೆ.
ನಿಯಮಗಳು ಏನು?
- 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- ಶಿಕ್ಷಣ ಸಂಸ್ಥೆಗಳ 100 ಮೀಟರ್ ಸುತ್ತಳತೆಯಲ್ಲಿ ಬಿಡಿಯಾಗಿ ಅಥವಾ ಒಂಟಿ ಕಡ್ಡಿಯಾಗಿ ಸಿಗರೇಟ್ ಮಾರಾಟವನ್ನು ನಿಷೇಧಿಸಲಾಗಿದೆ.
- ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ, ಧೂಮಪಾನ, ಮತ್ತು ತಂಬಾಕು ಉಗಿಯುವಿಕೆಯನ್ನು ನಿಷೇಧಿಸಲಾಗಿದೆ.
ಪ್ರತ್ಯೇಕ ಧೂಮಪಾನ ಪ್ರದೇಶಕ್ಕೆ ಅವಕಾಶ
30 ಕೊಠಡಿಗಳಿಗಿಂತ ಹೆಚ್ಚಿನ ಸಾಮರ್ಥ್ಯದ ಹೋಟೆಲ್‌ಗಳು, 30 ಅಥವಾ ಅದಕ್ಕಿಂತ ಹೆಚ್ಚು ಆಸನ ಸಾಮರ್ಥ್ಯದ ರೆಸ್ಟೋರೆಂಟ್‌ಗಳು, ಮತ್ತು ವಿಮಾನ ನಿಲ್ದಾಣಗಳಲ್ಲಿ ಪ್ರತ್ಯೇಕ ಧೂಮಪಾನ ಪ್ರದೇಶವನ್ನು ಒದಗಿಸಲು ಅವಕಾಶವಿದೆ.
ಹುಕ್ಕಾ ಬಾರ್‌ಗೆ ಸಂಪೂರ್ಣ ನಿಷೇಧ
ಹುಕ್ಕಾ ಬಾರ್‌ಗಳನ್ನು ತೆರೆಯುವುದು ಅಥವಾ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಉಪಹಾರ ಗೃಹ, ಪಬ್, ಬಾರ್, ಅಥವಾ ರೆಸ್ಟೋರೆಂಟ್ ಸೇರಿದಂತೆ ಯಾವುದೇ ಸ್ಥಳದಲ್ಲಿ ಹುಕ್ಕಾ ಬಾರ್‌ಗೆ ಅವಕಾಶವಿಲ್ಲ. ಹುಕ್ಕಾ ಎಂದರೆ ತಂಬಾಕು ಅಥವಾ ಇತರೆ ತಂಬಾಕು ಉತ್ಪನ್ನಗಳನ್ನು ಸಾಮೂಹಿಕವಾಗಿ ಧೂಮಪಾನ ಮಾಡಲು ಜನರು ಸೇರುವ ಸ್ಥಳವಾಗಿದೆ.
ನಿಯಮ ಉಲ್ಲಂಘನೆಗೆ ದಂಡನೆ
- ಹುಕ್ಕಾ ಬಾರ್ ನಡೆಸಿದರೆ: ಒಂದರಿಂದ ಮೂರು ವರ್ಷಗಳವರೆಗೆ ಕಾರಾಗೃಹವಾಸ ಮತ್ತು ₹50,000 ರಿಂದ ₹1 ಲಕ್ಷದವರೆಗೆ ದಂಡ.
- ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ/ಮಾರಾಟ: ಶಿಕ್ಷಣ ಸಂಸ್ಥೆಗಳ 100 ಮೀಟರ್ ಸುತ್ತಳತೆಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ/ಮಾರಾಟ, ಮತ್ತು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ತಂಬಾಕು ಉತ್ಪನ್ನ ಮಾರಾಟ ಮಾಡಿದರೆ ₹200 ರಿಂದ ₹1000 ದಂಡ ವಿಧಿಸಲಾಗುವುದು.
ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರವು ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿದ್ದು, ತಂಬಾಕು ಉತ್ಪನ್ನಗಳ ಬಳಕೆಯನ್ನು ನಿಯಂತ್ರಿಸಿ, ಯುವ ಜನತೆಯ ಆರೋಗ್ಯವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.