ಬೆಂಗಳೂರು : ವಿಪಕ್ಷ ನಾಯಕ ಆರ್. ಅಶೋಕ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾಯಿ ಭಾರತಾಂಬೆಗೆ ನಮಸ್ಕರಿಸಿದ್ದಕ್ಕೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಿರುವ ಕಾಂಗ್ರೆಸ್ ಪಕ್ಷದ ವರ್ತನೆಯನ್ನು ಆರ್. ಅಶೋಕ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಆರ್. ಅಶೋಕ, “ನಮಸ್ತೇ ಸದಾ ವತ್ಸಲೇ ಮಾತೃಭೂಮೇ” ಎಂದು ತಾಯಿ ಭಾರತಾಂಬೆಗೆ ನಮಸ್ಕರಿಸಿದ್ದಕ್ಕೆ ಕ್ಷಮೆ ಕೇಳಬೇಕೆಂದರೆ, ಕಾಂಗ್ರೆಸ್ ಪಕ್ಷದ ಪ್ರಕಾರ ಭಾರತೀಯರು ಯಾರಿಗೆ ಜಯಕಾರ ಹಾಡಬೇಕು? ಇಟಲಿಯ ಮಾತೆಗೆಯೇ? ಇಟಲಿಯಿಂದ ಬಂದ ಮೇಡಂಗೆಯೇ?” ಎಂದು ಕಿಡಿಕಾರಿದ್ದಾರೆ.
ಆರ್. ಅಶೋಕ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಾರ್ಥನಾ ಗೀತೆಯ ಮೊದಲ ಸಾಲಿನ ಸಾರಾಂಶವನ್ನು ಉಲ್ಲೇಖಿಸಿ, “ನಮ್ಮನ್ನೆಲ್ಲ ವಾತ್ಸಲ್ಯದಿಂದ ಸಾಕುತ್ತಿರುವ ಮಾತೃ ಸಮಾನಳಾದ ತಾಯಿ ಭಾರತಾಂಬೆಗೆ ನನ್ನ ನಮಸ್ಕಾರಗಳು” ಎಂದು ಬರೆದಿದ್ದಾರೆ. “ಜನ್ಮ ಕೊಟ್ಟ ಮಾತೃಭೂಮಿಯ ಬಗ್ಗೆ ಈ ಭಾವನೆ ಇಟ್ಟುಕೊಳ್ಳುವುದು ತಪ್ಪೇ? ತಾಯಿನೆಲಕ್ಕೆ ನಮಸ್ಕಾರ ಮಾಡುವುದೇ ತಪ್ಪೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ಟೀಕಿಸಿರುವ ಆರ್. ಅಶೋಕ, “ವಿಧಾನಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದವರನ್ನು ಸಮರ್ಥಿಸಿಕೊಳ್ಳುವ ಕಾಂಗ್ರೆಸ್, ತಾಯಿ ಭಾರತಾಂಬೆಗೆ ನಮಸ್ಕರಿಸುವವರನ್ನು ಅಪರಾಧಿಗಳಂತೆ ಚಿತ್ರಿಸುತ್ತಿದೆ. ಇದನ್ನು ದೇಶದ್ರೋಹಿ ಮನಸ್ಥಿತಿ ಎನ್ನದೇ ಬೇರೇನು ಕರೆಯಬಹುದು?” ಎಂದು ಕಿಡಿಕಾರಿದ್ದಾರೆ.
ಡಿ.ಕೆ. ಶಿವಕುಮಾರ್ ಅವರಿಗೆ ಕ್ಷಮೆ ಕೇಳುವಂತೆ ಆದೇಶಿಸಿದವರು ಯಾರು ಎಂದು ಪ್ರಶ್ನಿಸಿರುವ ಆರ್. ಅಶೋಕ, “ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ಸುರ್ಜೆವಾಲಾ, ಅಥವಾ ಹರಿಪ್ರಸಾದ್ ಅವರೇ? ಯಾರ ಒತ್ತಡಕ್ಕೆ ಕ್ಷಮೆ ಕೇಳಿದ್ದಾರೆ?” ಎಂದು ಕೇಳಿದ್ದಾರೆ. “ಡಿ.ಕೆ. ಶಿವಕುಮಾರ್ ಅವರಿಗೆ ಕೊಂಚವಾದರೂ ಸ್ವಾಭಿಮಾನ ಇದ್ದಿದ್ದರೆ, ಕ್ಷಮೆ ಕೇಳಬಾರದಿತ್ತು. ಒತ್ತಡ ಇದ್ದಿದ್ದರೆ, ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಿತ್ತು” ಎಂದು ಆರ್. ಅಶೋಕ ತಿಳಿಸಿದ್ದಾರೆ.
“ತನ್ನ ಮಾತೃಭೂಮಿಯನ್ನು ಪ್ರೀತಿಸದವನು ಏನನ್ನೂ ಪ್ರೀತಿಸಲಾರ” ಎಂಬ ಗಾದೆಯನ್ನು ಉಲ್ಲೇಖಿಸಿರುವ ಆರ್. ಅಶೋಕ, ಕಾಂಗ್ರೆಸ್ ಪಕ್ಷದಲ್ಲಿ “ಕುರ್ಚಿಯ ಮೇಲಿನ ಪ್ರೀತಿಗೆ ದೇಶಪ್ರೇಮವನ್ನು ತ್ಯಜಿಸಬೇಕು” ಎಂಬ ಪರಿಸ್ಥಿತಿ ಇದೆ ಎಂದು ವ್ಯಂಗ್ಯವಾಡಿದ್ದಾರೆ. “ಅಧಿಕಾರದ ವ್ಯಾಮೋಹಕ್ಕೆ ಜನ್ಮ ಕೊಟ್ಟ ತಾಯಿನೆಲವನ್ನೇ ಬಿಟ್ಟುಕೊಡುವ ಕೆಲವೊಂದು ನಾಯಕರು ನಾಡಿನ ಮುಖ್ಯಮಂತ್ರಿಗಳಾಗಲು ಹೊರಟಿರುವುದು ಕರ್ನಾಟಕದ ದೊಡ್ಡ ದುರಂತ” ಎಂದು ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.