ಬೆಂಗಳೂರು: ತುಂಗಭದ್ರಾ ಜಲಾಶಯದ 39 ಗೇಟ್‌ಗಳನ್ನು ಬದಲಾಯಿಸಲು ಟೆಂಡರ್ ಕರೆಯಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈಗಾಗಲೇ 6 ಗೇಟ್‌ಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ವಿಧಾನಸಭಾ ಅಧಿವೇಶನದಲ್ಲಿ ಇಂದು ನಿಯಮ 69ರ ಅಡಿಯಲ್ಲಿ ಸಾರ್ವಜನಿಕ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿದ ಸದಸ್ಯರಾದ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್ ಮತ್ತು ಬಸನಗೌಡ ತುರುವಿಹಾಳ ಅವರು ತುಂಗಭದ್ರಾ ಜಲಾಶಯದ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಈ ಸಂದರ್ಭದಲ್ಲಿ ಸರ್ಕಾರದ ಪರವಾಗಿ ಉತ್ತರಿಸಿದ ಉಪಮುಖ್ಯಮಂತ್ರಿಗಳು, ತುಂಗಭದ್ರಾ ಜಲಾಶಯದ ಬೋರ್ಡ್ 1633 ಅಡಿಗಳ ಬದಲಿಗೆ 1626 ಅಡಿ ನೀರನ್ನು ಸಂಗ್ರಹಿಸಲು ಸೂಚಿಸಿದೆ ಎಂದು ತಿಳಿಸಿದರು.
ತಾಂತ್ರಿಕ ತೊಂದರೆಗಳಿಂದಾಗಿ ಈ ಬಾರಿ ರೈತರಿಗೆ ಎರಡನೇ ಬೆಳೆಗೆ ನೀರು ಒದಗಿಸಲು ಸಾಧ್ಯವಿಲ್ಲ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು. ಆದರೂ, ರೈತರ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು. ಕುಡಿಯುವ ನೀರು ಮತ್ತು ಕೈಗಾರಿಕೆಗಳಿಗೆ ನೀರು ಸರಬರಾಜು ಮಾಡಲಾಗುವುದು ಎಂದ ಅವರು, ಜಲಾಶಯದ ದುರಸ್ತಿ ಕಾಮಗಾರಿಗಳಿಗೆ ಮತ್ತು ಸಿಬ್ಬಂದಿ ಕೊರತೆಯನ್ನು ನೀಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.