ಬೆಂಗಳೂರು: ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂಬ ತುಳುವರ ಬೇಡಿಕೆಯನ್ನು ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಲಾಗಿದ್ದ “ಅಷ್ಟೆಮಿದ ಐಸಿರಿ ತುಳುವ ತರ್ಲ್ ಸಾಸಿರಿ” ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಶಿವಕುಮಾರ್, ಕರಾವಳಿ ಜನರ ಸಂಸ್ಕೃತಿ, ಶಿಕ್ಷಣ, ಮತ್ತು ಉದ್ಯಮ ಕ್ಷೇತ್ರದ ಕೊಡುಗೆಗಳನ್ನು ಶ್ಲಾಘಿಸಿದರು. “ಇತ್ತೀಚೆಗೆ ಕುಂದಾಪುರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಇಂದಿನ ಈ ಕಾರ್ಯಕ್ರಮದಲ್ಲಿ ತುಳುವರ ಶಕ್ತಿ, ಉತ್ಸಾಹ ನೋಡಿದರೆ, ನೀವೆಲ್ಲರೂ ಒಂದು ದಿನ ಬೆಂಗಳೂರಿನಿಂದ ನಮ್ಮನ್ನು ಖಾಲಿ ಮಾಡಿಸುವಿರೇನೋ ಎಂಬ ಭಯವಾಗುತ್ತಿದೆ,” ಎಂದು ಚಟಾಕಿಯಿಂದ ಹೇಳಿ, ಸಭಿಕರನ್ನು ರಂಜಿಸಿದರು.
“ಕರಾವಳಿ ಜನರು ಇಡೀ ದೇಶಕ್ಕೆ ಸಂಸ್ಕೃತಿ, ಶಿಕ್ಷಣ, ಧಾರ್ಮಿಕ ಶಕ್ತಿ, ಮತ್ತು ಬ್ಯಾಂಕಿಂಗ್ ವ್ಯವಸ್ಥೆಯಂತಹ ಕೊಡುಗೆಗಳನ್ನು ನೀಡಿದ್ದಾರೆ. ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ನೀವು ಮುಂಚೂಣಿಯಲ್ಲಿದ್ದೀರಿ. ದಕ್ಷಿಣ ಕನ್ನಡ ಮತ್ತು ಕರಾವಳಿ ಭಾಗದ ಜನ ವಿದ್ಯಾವಂತರು, ಬುದ್ಧಿವಂತರು, ಮತ್ತು ಪ್ರಜ್ಞಾವಂತರು. ನಾನು ನಿಮ್ಮೊಂದಿಗಿದ್ದೇನೆ, ನಿಮ್ಮ ಬೆಂಬಲಕ್ಕಾಗಿ ನಾನಿಲ್ಲಿಗೆ ಬಂದಿದ್ದೇನೆ. ನಿಮ್ಮ ಆಶೀರ್ವಾದವನ್ನಷ್ಟೇ ಬಯಸುತ್ತೇನೆ,” ಎಂದು ಶಿವಕುಮಾರ್ ತಿಳಿಸಿದರು.
ಕರಾವಳಿ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಮತ್ತು ವಲಸೆ ತಡೆಯಲು ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸುವ ಬಗ್ಗೆ ಸ್ಥಳೀಯ ಶಾಸಕರು ಮತ್ತು ಸ್ಪೀಕರ್ ಯು.ಟಿ. ಖಾದರ್ ಅವರೊಂದಿಗೆ ಚರ್ಚಿಸಿರುವುದಾಗಿ ಡಿಸಿಎಂ ತಿಳಿಸಿದರು. “ನಿಮ್ಮ ಸಂಸ್ಕೃತಿ ಮತ್ತು ಇತಿಹಾಸ ದೇಶದ ಯಾವುದೇ ಭಾಗದಲ್ಲೂ ಕಾಣದಂತಹದ್ದು. ನೀವೆಲ್ಲರೂ ಕರ್ನಾಟಕ ರಾಜ್ಯದ ಅಮೂಲ್ಯ ಆಸ್ತಿ,” ಎಂದು ಅವರು ಹೇಳಿದರು.
ತುಳು ಭಾಷೆಯ ಅಧಿಕೃತ ಮಾನ್ಯತೆಗೆ ಸಂಬಂಧಿಸಿದಂತೆ ತುಳುವರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಡಿಸಿಎಂ, ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಭರವಸೆ ನೀಡಿದ್ದಾರೆ.