ಆದರೂ ಸಲಹೆ ಗೌರವಿಸಿ ಅಧಿಕಾರಿಗಳಿಗೆ ಪರಿಶೀಲನೆಗೆ ಸೂಚನೆ
ತಮ್ಮ ಕ್ಷೇತ್ರದ ಜನರಿಗೆ ಕಾರು ಬಿಟ್ಟು ಸಾರ್ವಜನಿಕ ಸಾರಿಗೆ ಬಳಸಲು ಕರೆ ನೀಡಲಿ: ಸಂಸದರಿಗೆ ಡಿಕೆಶಿ ಸವಾಲು
ಬಿಜೆಪಿ ಸಂಸದರು ಪ್ರಧಾನಿ ಬಳಿ ಬಂದು ಅನುದಾನ ಕೇಳಲಿ; ಟನಲ್ ರಸ್ತೆಗೆ ನ್ಯಾಯಾಲಯ ಸಮಿತಿ ರಚಿಸಿ ಪರಿಶೀಲಿಸಲಿ
ಬೆಂಗಳೂರು: ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೀಡಿದ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಂಡುಬಂದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಆದರೂ ಅವರ ಸಲಹೆಗಳನ್ನು ಗೌರವಿಸಿ, ಅಧಿಕಾರಿಗಳಿಗೆ ಪರಿಶೀಲಿಸಲು ಸೂಚಿಸುವುದಾಗಿ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದ ಬಳಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ತೇಜಸ್ವಿ ಸೂರ್ಯ ಅವರು ಟನಲ್ ರಸ್ತೆ ಕೇವಲ ಕಾರುಗಳಿಗೆ ಮಾತ್ರ ಅನುಕೂಲವಾಗುತ್ತದೆ, ಮೆಟ್ರೋ ವಿಸ್ತರಣೆ ಮಾಡಬೇಕು ಎಂದು ಹೇಳಿದ್ದಾರೆ. ಮೆಟ್ರೋ ಸೇರ್ಪಡೆಗೆ ನಮಗೆ ಆಕ್ಷೇಪಣೆ ಇಲ್ಲ. ಖಾಸಗಿ ಬಸ್ಗಳು, ಸಣ್ಣ ಬಸ್ಗಳಿಗೆ ಅವಕಾಶ ನೀಡಿ ಎಂದಿದ್ದಾರೆ. ಆದರೆ ರಸ್ತೆಗಳಲ್ಲಿ ವಾಹನ ಸಂಖ್ಯೆ ಈಗಾಗಲೇ ಹೆಚ್ಚಾಗಿದೆ. ಇದರ ಉಪಯೋಗ ಏನು ಎಂಬುದನ್ನು ಚರ್ಚಿಸಬೇಕು” ಎಂದರು.
ಪ್ರಧಾನಿ ಭೇಟಿಗೆ ಆಹ್ವಾನ
“ಬಿಎಂಎಲ್ಟಿ ಮಾಡಬೇಕು ಎಂದು ಸೂರ್ಯ ಹೇಳಿದ್ದಾರೆ. ಅವರ ಕಾಲದಲ್ಲಿ ಯಾಕೆ ಮಾಡಲಿಲ್ಲ ಎಂದು ಕೇಳಿದೆ. ಬೆಂಗಳೂರು ಅಭಿವೃದ್ಧಿಗೆ ಕೇಂದ್ರದಿಂದ ಎಷ್ಟು ಅನುದಾನ ತರುತ್ತೀರಿ ಎಂದು ಪ್ರಶ್ನಿಸಿದೆ. ನಿಮ್ಮ ಸಂಸದರೆಲ್ಲ ಬನ್ನಿ, ನಾನೂ ಬರುತ್ತೇನೆ. ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಅನುದಾನಕ್ಕೆ ಒತ್ತಾಯ ಮಾಡೋಣ” ಎಂದು ಡಿಕೆಶಿ ಆಹ್ವಾನಿಸಿದರು.
ಲಾಲ್ಬಾಗ್ನಲ್ಲಿ 6 ಎಕರೆ ಭೂ ಸ್ವಾಧೀನವಿಲ್ಲ
ಟನಲ್ ರಸ್ತೆಗೆ ಲಾಲ್ಬಾಗ್ನ 6 ಎಕರೆ ಭೂಮಿ ಬಳಸುವುದಿಲ್ಲ. ಕೇವಲ ಮೂಲೆಯಲ್ಲಿ ಪ್ರವೇಶ-ನಿರ್ಗಮನಕ್ಕೆ ಅವಕಾಶ ನೀಡಲಾಗುವುದು ಎಂದ ಅವರು, “ಇಲ್ಲಿ ಬೇಡ ಎಂದರೆ ಬೇರೆಡೆ ಸೂಚಿಸಿ ಎಂದು ಕೇಳಿದೆ. ಎಲ್ಲ ದೇಶಗಳಲ್ಲೂ ಟನಲ್ ಬೇಡ ಎನ್ನುತ್ತಾರೆ ಎಂದರು. ಒಬ್ಬರ ಮಾತಿನಂತೆ ಕೇಳಲಾಗದು ಎಂದೆ. ಒಆರ್ಆರ್ನಲ್ಲಿ 70% ಸಾರ್ವಜನಿಕ ಸಾರಿಗೆ, ಬಿಟಿಆರ್ಎಸ್, ಸಬ್ಅರ್ಬನ್ ರೈಲು ಹೆಚ್ಚಿಸಬೇಕು ಎಂದಿದ್ದಾರೆ. ಸರಿ, ಕೇಂದ್ರದ ಬಳಿ ಹಣ ಕೇಳೋಣ. ಇದುವರೆಗೆ ಕೇಂದ್ರ ಹಣ ನೀಡದೇ ಒಂದು ರೈಲೂ ಸೇರಿಸಿಲ್ಲ. ಸಲಹೆ ಮಾತ್ರವಲ್ಲ, ಹಣವೂ ತನ್ನಿ ಎಂದು ಹೇಳಿದ್ದೇನೆ” ಎಂದರು.
ಕಾರು ಬಿಟ್ಟು ಸಾರ್ವಜನಿಕ ಸಾರಿಗೆ ಬಳಸಿ: ಸವಾಲು
ಸಾರ್ವಜನಿಕ ಸಾರಿಗೆ ಹೆಚ್ಚಿಸಿದರೆ ಖಾಸಗಿ ವಾಹನ ಕಡಿಮೆಯಾಗುತ್ತದೆ ಎಂಬ ಸೂರ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, “ನೀವು ಇಲ್ಲಿಗೆ ವಾಹನದಲ್ಲಿ ಬಂದಿದ್ದೀರಿ. ನಾನು ತಡೆಯಲು ಆಗುತ್ತದೆಯೇ? ಇದು ಸಾಮಾಜಿಕ ಬಾಧ್ಯತೆ. ಜನರು ತಮ್ಮ ವಾಹನದಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಸಂಸದರು ತಮ್ಮ ಕ್ಷೇತ್ರದ ಜನರಿಗೆ ಕಾರು ಮನೆಯಲ್ಲೇ ಇರಲಿ, ಸಾರ್ವಜನಿಕ ಸಾರಿಗೆ ಬಳಸಿ ಎಂದು ಕರೆ ನೀಡಲಿ. ಯಾರು ಪಾಲಿಸುತ್ತಾರೆ ನೋಡೋಣ. ಕಾರಿಲ್ಲದ ಹುಡುಗನಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಾರೆ. ಇಂತಹ ಸಾಮಾಜಿಕ ಬಾಧ್ಯತೆಗಳ ಬಗ್ಗೆ ಸಂಸದರಿಗೆ ಅರಿವಿಲ್ಲ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಪಿಐಎಲ್ಗೆ ಪ್ರತಿಕ್ರಿಯೆ
ತೇಜಸ್ವಿ ಸೂರ್ಯ ಒಂದೆಡೆ ಭೇಟಿ ಮಾಡಿ, ಮತ್ತೊಂದೆಡೆ ಪಿಐಎಲ್ ಸಲ್ಲಿಸಿರುವ ಬಗ್ಗೆ ಕೇಳಿದಾಗ, “ಪಿಐಎಲ್ ಹಾಕಿಕೊಳ್ಳಲಿ. ನ್ಯಾಯಾಲಯ ಸಮಿತಿ ರಚಿಸಿ ಎಲ್ಲ ಸ್ಥಳಗಳನ್ನು ಪರಿಶೀಲಿಸಲಿ. ನಾವು ತಪ್ಪು ಮಾಡಿದ್ದರೆ ತಿಳಿಸಲಿ, ಸರಿಪಡಿಸಿಕೊಳ್ಳುತ್ತೇವೆ” ಎಂದು ಸ್ಪಷ್ಟಪಡಿಸಿದರು.
ಹಣವಿಲ್ಲದೆ ಸಲಹೆಯಿಂದ ಪರಿಹಾರವಿಲ್ಲ
“ಖಾಲಿ ಟ್ರಂಕ್ ಎಂದಿದ್ದೇನೆ. ಯೋಜನೆಗೆ ಹಣ ಬೇಕು. ಟ್ವೀಟ್, ಟೀಕೆಯಿಂದ ಪರಿಹಾರ ಸಿಗದು. ಪ್ರಧಾನಿ ಬಳಿ ಹಣ ತರಿಸಲಿ. ಸಲಹೆ ಎಲ್ಲರೂ ನೀಡುತ್ತಾರೆ, ಹಣ ಕೊಡುವವರು ಯಾರು?” ಎಂದು ಪ್ರಶ್ನಿಸಿದರು.
ಪರಿಷತ್ ಚುನಾವಣೆ: 8-10 ದಿನಗಳಲ್ಲಿ ಅಭ್ಯರ್ಥಿ ಅಂತಿಮ
ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ, “ಮುಂದಿನ 8-10 ದಿನಗಳಲ್ಲಿ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತೇವೆ. ಕಾರ್ಯಕರ್ತರೊಂದಿಗೆ ಚರ್ಚಿಸಿ ದೆಹಲಿಗೆ ಹೆಸರುಗಳನ್ನು ಶಿಫಾರಸು ಮಾಡುತ್ತೇನೆ” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.












