ಬೆಂಗಳೂರು :ಕನ್ನಡ ನಾಡಿನ ಪ್ರಸಿದ್ಧ ನಾಡಹಬ್ಬ ದಸರಾವನ್ನು ಉದ್ಘಾಟಿಸಲು ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಇಲ್ಲದ ಸಾಹಿತಿ ಭಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರವಾಗಿ ಖಂಡಿಸಿದ್ದಾರೆ. ಈ ಕ್ರಮವು ಹಿಂದೂ ವಿರೋಧಿ ನೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಆಹ್ವಾನವನ್ನು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, “ದಸರಾ ಉದ್ಘಾಟನೆ ಎಂದರೆ ತಾಯಿ ಚಾಮುಂಡೇಶ್ವರಿಯ ಮೂರ್ತಿ ಪೂಜೆ ನೆರವೇರಿಸಿ, ದೇವಿಗೆ ಪುಷ್ಪವೃಷ್ಟಿ ಸಮರ್ಪಿಸುವ ಸಂಪ್ರದಾಯವಾಗಿದೆ. ಇಂತಹ ಧಾರ್ಮಿಕ ಕಾರ್ಯಕ್ರಮವನ್ನು ಅನ್ಯಧರ್ಮೀಯರಿಂದ ಒಪ್ಪಲು ಸಾಧ್ಯವಿಲ್ಲ. ಸರ್ಕಾರದ ಈ ಕ್ರಮವು ಹಿಂದೂಗಳ ಭಾವನೆಗೆ ಧಕ್ಕೆ ತರುವಂತಿದೆ,” ಎಂದು ಆಕ್ಷೇಪ ವ್ಯಕ್ತಪಡಿಸಿದರು.
2023ರ ಜನಸಾಹಿತ್ಯ ಸಮ್ಮೇಳನದಲ್ಲಿ ಭಾನು ಮುಷ್ತಾಕ್ ಅವರು ಕನ್ನಡವನ್ನು ಭುವನೇಶ್ವರಿಗೆ ಹೋಲಿಸಿ, ಹಳದಿ-ಕೆಂಪು ಬಣ್ಣದ ಕನ್ನಡ ಧ್ವಜವನ್ನು ಒಪ್ಪದಿರುವ ಬಗ್ಗೆ ಹೇಳಿಕೆ ನೀಡಿದ್ದರು. “ಕನ್ನಡ ತಾಯಿ ಭುವನೇಶ್ವರಿಯ ಧ್ವಜವನ್ನೇ ಒಪ್ಪದವರು ಚಾಮುಂಡೇಶ್ವರಿಯನ್ನು ಒಪ್ಪುತ್ತಾರೆಯೇ? ದಸರಾದಂತಹ ಹಿಂದೂ ಧಾರ್ಮಿಕ ಉತ್ಸವವನ್ನು ಉದ್ಘಾಟಿಸಲು ಇವರನ್ನು ಆಯ್ಕೆ ಮಾಡಿರುವುದು ಯಾವ ಉದ್ದೇಶಕ್ಕಾಗಿ?” ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದರು.
“ತಾಯಿ ದುರ್ಗೆಯನ್ನು 9 ದಿನಗಳ ಕಾಲ ಪೂಜಿಸಿ, ದುಷ್ಟಶಕ್ತಿ ಮಹಿಷಾಸುರನ ಸಂಹಾರವನ್ನು ಸಂಭ್ರಮಿಸುವ ದಸರಾ ಕೇವಲ ಸಾಂಸ್ಕೃತಿಕ ಹಬ್ಬವಲ್ಲ, ಇದು ಹಿಂದೂ ಧಾರ್ಮಿಕ ಉತ್ಸವ. ಭಾನು ಮುಷ್ತಾಕ್ ಅವರಿಗೆ ಈ ಉತ್ಸವದ ಉದ್ಘಾಟನೆಗೆ ಆಹ್ವಾನಿಸಿರುವುದು ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಕೃತ್ಯವಾಗಿದೆ,” ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.
ಅವರು ಮುಂದುವರೆದು, “ಕನ್ನಡ ತಾಯಿ ಭುವನೇಶ್ವರಿಯನ್ನು ಒಪ್ಪದ ಭಾನು ಮುಷ್ತಾಕ್ ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗುವಂತಿಲ್ಲ. ಸರ್ಕಾರ ತಕ್ಷಣ ಈ ಆಹ್ವಾನವನ್ನು ಹಿಂಪಡೆದು, ಹಿಂದೂ ಧಾರ್ಮಿಕ ನಂಬಿಕೆಯಲ್ಲಿ ಅಚಲವಾದ ವಿಶ್ವಾಸ ಹೊಂದಿರುವ, ಆಚಾರ-ವಿಚಾರಗಳಲ್ಲಿ ಪರಿಣತರಾದ ವ್ಯಕ್ತಿಯನ್ನು ಆಹ್ವಾನಿಸಬೇಕು,” ಎಂದು ಒತ್ತಾಯಿಸಿದರು.
ಭಾನು ಮುಷ್ತಾಕ್ ಅವರ ಸಾಹಿತ್ಯಕ ಕೊಡುಗೆಗೆ ಗೌರವವಿದೆ ಎಂದು ಒಪ್ಪಿಕೊಂಡ ಅವರು, “ಆದರೆ ಧಾರ್ಮಿಕ ನಂಬಿಕೆ ಇಲ್ಲದವರನ್ನು ಧಾರ್ಮಿಕ ಉತ್ಸವಕ್ಕೆ ಕರೆಯುವುದು ಸರಿಯಲ್ಲ. ಇವರು ಚಾಮುಂಡೇಶ್ವರಿಯನ್ನು ನಂಬಿ, ದೀಪ ಬೆಳಗಿಸುತ್ತಾರೆಯೇ? ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು,” ಎಂದು ಆಗ್ರಹಿಸಿದರು.
2023ರ ಜನಸಾಹಿತ್ಯ ಸಮ್ಮೇಳನದಲ್ಲಿ ಭಾನು ಮುಷ್ತಾಕ್ ಅವರು ಕನ್ನಡ ಧ್ವಜ ಮತ್ತು ಭುವನೇಶ್ವರಿಯ ಬಗ್ಗೆ ಮಾಡಿದ ಹೇಳಿಕೆಯ ವಿಡಿಯೋವನ್ನು ಉಲ್ಲೇಖಿಸಿದ ಶೋಭಾ, “ಕುವೆಂಪು ಅವರು ಕರ್ನಾಟಕವನ್ನು ಭಾರತ ಮಾತೆಯ ತನುಜಾತೆ ಎಂದಿದ್ದಾರೆ. ಭಾನು ಮುಷ್ತಾಕ್ ಅವರು ಭುವನೇಶ್ವರಿಗೆ ಅಪಮಾನ ಮಾಡಿದ ರೀತಿಯಲ್ಲಿ ಚಾಮುಂಡೇಶ್ವರಿಯನ್ನೂ ಅಪಮಾನಿಸದಿರಲು ಸಾಧ್ಯವಿಲ್ಲ,” ಎಂದು ಆರೋಪಿಸಿದರು.
“ಸರ್ಕಾರ ಈ ವಿಷಯದಲ್ಲಿ ಸ್ಪಷ್ಟನೆ ನೀಡದಿದ್ದರೆ, ಭಾನು ಮುಷ್ತಾಕ್ ಅವರ ಆಹ್ವಾನವನ್ನು ಹಿಂಪಡೆಯಬೇಕು. ಮೂರ್ತಿ ಪೂಜೆಯನ್ನು ಒಪ್ಪದವರನ್ನು ದಸರಾ ಉದ್ಘಾಟನೆಗೆ ಕರೆಯುವುದು ಸರಿಯಲ್ಲ,” ಎಂದು ಶೋಭಾ ಕರಂದ್ಲಾಜೆ ತೀವ್ರವಾಗಿ ಟೀಕಿಸಿದರು.












