ಬೆಂಗಳೂರು: ದಾಸರಹಳ್ಳಿ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ಪಾದಾಚಾರಿ ಮಾರ್ಗಗಳ ಒತ್ತುವರಿಯನ್ನು ತೆರವುಗೊಳಿಸಲು ಬೃಹತ್ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ದಾಸರಹಳ್ಳಿ ವಲಯದ ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ ತಿಳಿಸಿದ್ದಾರೆ.
ದಾಸರಹಳ್ಳಿಯಲ್ಲಿ ಕಾರ್ಯಾಚರಣೆ:
ದಾಸರಹಳ್ಳಿ ವಲಯದ ಕೆಐಎಡಿಬಿ ರಸ್ತೆಯ ಎನ್‌ಟಿಟಿಎಫ್ ವೃತ್ತದಿಂದ 14ನೇ ಕ್ರಾಸ್ ಜಂಕ್ಷನ್ ವರೆಗೆ ಅನಧಿಕೃತ ಒ.ಎಫ್.ಸಿ. ಕೇಬಲ್‌ಗಳು, ಬಿದ್ದ ರೆಂಬೆ-ಕೊಂಬೆಗಳು ಹಾಗೂ ಪಾದಾಚಾರಿಗಳ ಸಂಚಾರಕ್ಕೆ ಅಡಚಣೆಯಾಗಿದ್ದ ದೊಡ್ಡ ಕಲ್ಲುಗಳನ್ನು ತೆರವುಗೊಳಿಸಲಾಗಿದೆ. ಇದರಿಂದ ಪಾದಾಚಾರಿಗಳಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ.
ಈ ಕಾರ್ಯಾಚರಣೆಯ ವೇಳೆ ಪಾದಾಚಾರಿ ಮಾರ್ಗದಲ್ಲಿ ಒತ್ತುವರಿಯಾಗಿದ್ದ ನಾಲ್ಕು ತಳ್ಳುಗಾಡಿಗಳನ್ನು ತೆರವುಗೊಳಿಸಲಾಗಿದ್ದು, ಒತ್ತುವರಿ ಮಾಡಿದ್ದ ನಾಲ್ಕು ಸ್ಥಳಗಳಿಗೆ ಒಟ್ಟು 4,000 ರೂಪಾಯಿ ದಂಡ ವಿಧಿಸಲಾಗಿದೆ.
ಬೊಮ್ಮನಹಳ್ಳಿಯಲ್ಲಿ ಒತ್ತುವರಿ ತೆರವು:
ಬೊಮ್ಮನಹಳ್ಳಿ ವಲಯದ ಅಂಜನಾಪುರ ಉಪವಿಭಾಗದ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಪಾದಾಚಾರಿ ಮಾರ್ಗದ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಜೊತೆಗೆ, ಎಚ್.ಎಸ್.ಆರ್. ಲೇಔಟ್‌ನಲ್ಲಿ ಪಾದಾಚಾರಿ ಮಾರ್ಗದಲ್ಲಿ ಇರಿಸಲಾಗಿದ್ದ ಶಾಶ್ವತ ಮಳಿಗೆಗಳನ್ನೂ ತೆಗೆದುಹಾಕಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಭಾಗವಹಿಸಿದ್ದರು.
ಈ ಕಾರ್ಯಾಚರಣೆಯಿಂದ ಪಾದಾಚಾರಿಗಳಿಗೆ ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಬಸವರಾಜ್ ಕಬಾಡೆ ಹೇಳಿದ್ದಾರೆ.