ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿ ನಡೆದ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನಿಖರವಾದ ಖಚಿತ ಮಾಹಿತಿಯ ಆಧಾರದ ಮೇಲೆ ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಯಿತು.
ಕನ್ನಮಂಗಲ ಗ್ರಾಮದ ಸಮೀಪವಿರುವ ಫಾರ್ಮ್ ಹೌಸ್‌ನಲ್ಲಿ ನಡೆದಿದ್ದ ಈ ಪಾರ್ಟಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಯುವಕ-ಯುವತಿಗಳು ಭಾಗಿಯಾಗಿದ್ದರು. ಪಾರ್ಟಿಯಲ್ಲಿ ಮಾದಕ ವಸ್ತುಗಳು – ಕೊಕೆನ್, ಹೈಡ್ರೋ ಡ್ರಗ್ಸ್ ಮತ್ತು ಗಾಂಜಾ ಪತ್ತೆಯಾಗಿದ್ದು, ಯುವಕರು ಮತ್ತು ಯುವತಿಯರು ಮತ್ತಿನಲ್ಲಿ ತೇಲಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ದಾಳಿ ವೇಳೆ 23 ಯುವಕರು ಮತ್ತು 7 ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನಂತರ ಅವರನ್ನು ವೈದ್ಯಕೀಯ ತಪಾಸಣೆಗೆ ಕಳಿಸಲಾಗಿದೆ. ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರ ಪ್ರಾಥಮಿಕ ವಿಚಾರಣೆ ದೇವನಹಳ್ಳಿ ಎಸಿಪಿ ನವೀನ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ.
ಈ ಪಾರ್ಟಿ ಬೆಂಗಳೂರಿನ ಮೂಲದ ಸೈಯದ್ ಎಂಬುವವರಿಗೆ ಸೇರಿದ ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದುದಾಗಿ ತಿಳಿದುಬಂದಿದೆ. ಬರ್ತ್ ಡೇ ಪಾರ್ಟಿಯ ಹೆಸರಿನಲ್ಲಿ ಆಯೋಜಿಸಿದ್ದ ಈ ರೇವ್ ಪಾರ್ಟಿ ಬಗ್ಗೆ ಸ್ಥಳೀಯರಿಂದ ಬಂದ ಮಾಹಿತಿಯ ಮೇರೆಗೆ ಪೊಲೀಸರು ಮುಂಜಾನೆ ದಾಳಿ ನಡೆಸಿದರು.
ಪೊಲೀಸರು ಘಟನಾ ಸ್ಥಳದಲ್ಲಿ ಮಹಜರ್ ನಡೆಸಿದ್ದು, ಪತ್ತೆಯಾದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಇನ್ನಷ್ಟು ತನಿಖೆ ನಡೆಯುತ್ತಿದೆ.