ಬೆಂಗಳೂರು : “ದೊಡ್ಡತೋಗೂರು ಪಟ್ಟಣ ಪಂಚಾಯಿತಿಯ ನಾಮಫಲಕ ಶೀಘ್ರವೇ ಬೆಂಗಳೂರು ದಕ್ಷಿಣ ಪಾಲಿಕೆ ಎಂದು ಬದಲಾಗಲಿದೆ ಎಂಬ ವಿಶ್ವಾಸವಿದೆ. ಬೆಂಗಳೂರು ನಗರದ ಭಾಗವಾಗಿರುವ ನೀವೆಲ್ಲರೂ ಮೂಲಭೂತ ಸೌಕರ್ಯಗಳಿಗೆ ಅರ್ಹರಿದ್ದೀರಿ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಗುರುವಾರ ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡತೋಗೂರು ಪಟ್ಟಣ ಪಂಚಾಯಿತಿಯ ನೂತನ ಕಚೇರಿ ಕಟ್ಟಡದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, “ಈ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 28 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮತಿ ನೀಡಲಾಗಿದೆ. ಬೆಂಗಳೂರಿನ ಹಿರಿಮೆಯನ್ನು ಈ ಭಾಗದ ಜನರೂ ಅನುಭವಿಸಬೇಕು,” ಎಂದರು.
ಪಾಲಿಕೆ ಚುನಾವಣೆಗೆ ಯಾವುದೇ ತಡೆಯಿಲ್ಲ:
“ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಧೇಯಕವನ್ನು ಈಗಾಗಲೇ ಅಂಗೀಕರಿಸಲಾಗಿದೆ. ಇದರಡಿ ಐದು ಪಾಲಿಕೆಗಳನ್ನು ರಚಿಸಲು ತೀರ್ಮಾನಿಸಲಾಗಿದ್ದು, ಇವುಗಳಿಗೆ ಚುನಾವಣೆ ನಡೆಸುವ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಲಾಗಿದೆ. ಯಾವುದೇ ಕಾರಣಕ್ಕೂ ಚುನಾವಣೆಯನ್ನು ನಿಲ್ಲಿಸುವುದಿಲ್ಲ,” ಎಂದು ಡಿಸಿಎಂ ತಿಳಿಸಿದರು. “ಅಕ್ಟೋಬರ್ 31ರ ವೇಳೆಗೆ ಪಾಲಿಕೆಗಳ ವಾರ್ಡ್‌ಗಳ ಸಂಖ್ಯೆ ಸೇರಿದಂತೆ ಅಂತಿಮ ರೂಪುರೇಷೆ ತಯಾರಾಗಲಿದೆ. ಈ ಭಾಗವನ್ನೂ ಗ್ರೇಟರ್ ಬೆಂಗಳೂರಿಗೆ ಸೇರಿಸಬೇಕೆಂಬ ಒತ್ತಡವಿದೆ. ಈಗಾಗಲೇ ಇದಕ್ಕೆ ನೀಲನಕ್ಷೆ ರೂಪಿಸಲಾಗಿದೆ,” ಎಂದು ಹೇಳಿದರು.

ಕಾವೇರಿ ನೀರು ಪೂರೈಕೆಗೆ ಒಂದು ವಾರದಲ್ಲಿ ಸಭೆ:
“ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಶಾಸಕರಾದ ಕೃಷ್ಣಪ್ಪ, ರಮೇಶ್, ಗೋಪಿನಾಥ್, ರಾಮೋಜಿ ಗೌಡ ಮತ್ತು ಮಾಜಿ ಸಂಸದ ಸುರೇಶ್ ಅವರು ಒತ್ತಾಯಿಸಿದ್ದಾರೆ. ಮುಂದಿನ ಒಂದು ವಾರದಲ್ಲಿ ಸಭೆ ನಡೆಸಿ ಕಾವೇರಿ ನೀರಿನ ಹಂಚಿಕೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು,” ಎಂದು ಶಿವಕುಮಾರ್ ಭರವಸೆ ನೀಡಿದರು.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮೇಲ್ಸೇತುವೆಗೆ ಕ್ರಮ:
“ಎಲೆಕ್ಟ್ರಾನಿಕ್ ಸಿಟಿಯ ಸಮೀಪವಿರುವ ಈ ಭಾಗದಲ್ಲಿ ತೆರಿಗೆ ಸಂಗ್ರಹದಲ್ಲಿ ಕೊರತೆ ಇದೆ ಎಂದು ಶಾಸಕ ಕೃಷ್ಣಪ್ಪ ಸೇರಿದಂತೆ ಹಲವರು ದೂರಿದ್ದಾರೆ. ಈ ಭಾಗದಲ್ಲಿ ಜನಸಂಖ್ಯೆಗೂ ಮತದಾರರ ಪಟ್ಟಿಗೂ ವ್ಯತ್ಯಾಸವಿದೆ. ಇದನ್ನು ಸರಿಪಡಿಸಿಕೊಳ್ಳಬೇಕು. ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಈ ಭಾಗಕ್ಕೆ ಭೇಟಿ ನೀಡಿ ಹಳದಿ ಮಾರ್ಗ ಉದ್ಘಾಟಿಸಲಿದ್ದಾರೆ. ಇದರಿಂದ ಉದ್ಯೋಗ ಸೃಷ್ಟಿಯಾಗಲಿದ್ದು, ಆಸ್ತಿ ಮೌಲ್ಯಗಳು ಏರಿಕೆಯಾಗಲಿವೆ,” ಎಂದರು.
“ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಂಜೆ ವೇಳೆ ಜನಸಂದಣಿ ಹೆಚ್ಚಿರುತ್ತದೆ. ಇಲ್ಲಿ ಎ2ಮೇಲ್ಸೇತುವೆ ನಿರ್ಮಾಣ ಅಗತ್ಯವಿದೆ. ಎಲ್ಸಿಟಾದವರು ಇದನ್ನುಎ ಮಾಡಬೇಕು. ಒಂದು ವೇಳೆ ಅವರು ಮಾಡದಿದ್ದರೆ, ಪಾಲಿಕೆ ವ್ಯಾಪ್ತಿಗೆ ತೆಗೆದುಕೊಂಡು ಅಗತ್ಯ ಕ್ರಮ ಕೈಗೊಳ್ಳಲಾಗುವುದು,” ಎಂದು ಡಿಸಿಎಂ ಎಚ್ಚರಿಕೆ ನೀಡಿದರು.
ಬೆಂಗಳೂರಿಗೆ ಹೊಸ ರೂಪ:
“ಬೆಂಗಳೂರಿನಲ್ಲಿ 113 ಕಿ.ಮೀ. ಮೇಲ್ಸೇತುವೆ, 40 ಕಿ.ಮೀ. ಡಬಲ್ ಡೆಕ್ಕರ್, ಮತ್ತು ಟನಲ್ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇದರಿಂದ ನಗರಕ್ಕೆ ಭವಿಷ್ಯದ ರೂಪ ನೀಡಲಾಗುತ್ತಿದೆ. ಪಕ್ಷಬೇಧವಿಲ್ಲದೆ ಎಲ್ಲರೂ ಸರ್ಕಾರಕ್ಕೆ ಮತ್ತು ನನಗೆ ಸಹಕಾರ, ಆಶೀರ್ವಾದ ನೀಡಿ,” ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.