ಬೆಂಗಳೂರು: ದೊಡ್ಡಮಟ್ಟದ ಸಭೆ, ಸಮಾರಂಭ, ಮತ್ತು ವಿಜಯೋತ್ಸವ ಕಾರ್ಯಕ್ರಮಗಳಿಗೆ ಹೊಸ ಎಸ್‌ಒಪಿ (ಸ್ಟ್ಯಾಂಡರ್ಡ್ ಆಪರೇಟಿವ್ ಪ್ರೊಸಿಜರ್) ರೂಪಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ದುರ್ಘಟನೆಯ ಬಗ್ಗೆ ಪ್ರತಿಕ್ರಿಯಿಸಿದರು. “ನಿನ್ನೆಯ ಘಟನೆ ರಾಜ್ಯದ ಕ್ರಿಕೆಟ್ ಇತಿಹಾಸದಲ್ಲಿ ಮೊದಲನೇಯದಾಗಿದೆ. ಸಾವನ್ನಪ್ಪಿದ ಆತ್ಮಗಳಿಗೆ ಶಾಂತಿ ಕೋರುತ್ತೇನೆ ಹಾಗೂ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ” ಎಂದರು.
ಮುಖ್ಯಮಂತ್ರಿಗಳು ಈ ಘಟನೆ ಕುರಿತು ಸಭೆ ನಡೆಸಿ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮ್ಯಾಜೆಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. “ಯಾರೇ ತಪ್ಪಿತಸ್ಥರ ಾದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ತನಿಖೆ ವರದಿ ಬರುವವರೆಗೆ ವಿವರಗಳನ್ನು ಬಹಿರಂಗಪಡಿಸಲಾಗುವುದಿಲ್ಲ” ಎಂದು ಸಚಿವರು ಸ್ಪಷ್ಟಪಡಿಸಿದರು.
ದುರ್ಘಟನೆಯಲ್ಲಿ 11 ಜನ ಸಾವನ್ನಪ್ಪಿದ್ದು, 56 ಜನ ಗಾಯಗೊಂಡಿದ್ದಾರೆ. 46 ಜನ ಚಿಕಿತ್ಸೆಯ ಬಳಿಕ ಮನೆಗೆ ಮರಳಿದ್ದಾರೆ, ಆದರೆ 10 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರ ಸ್ಥಿತಿ ಗಂಭೀರವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಇಂತಹ ದುರ್ಘಟನೆಗಳು ಮರುಕಳಿಸದಂತೆ ಗೃಹ ಇಲಾಖೆಯಿಂದ ಹೊಸ ಎಸ್‌ಒಪಿ ರೂಪಿಸಲಾಗುವುದು. ಇನ್ನುಮುಂದೆ ದೊಡ್ಡ ಸಮಾರಂಭಗಳು, ಸಭೆಗಳು, ಅಥವಾ ವಿಜಯೋತ್ಸವ ಕಾರ್ಯಕ್ರಮಗಳು ಪೊಲೀಸ್ ಇಲಾಖೆಯ ನಿರ್ದೇಶನದ ಚೌಕಟ್ಟಿನಲ್ಲಿ ನಡೆಯಬೇಕು” ಎಂದು ಪರಮೇಶ್ವರ ಒತ್ತಿ ಹೇಳಿದರು.
“20-25 ವರ್ಷದ ಯುವಕರು ಸಂತೋಷದಿಂದ ಕಾರ್ಯಕ್ರಮಕ್ಕೆ ಬಂದು ಜೀವ ಕಳೆದುಕೊಂಡಿದ್ದಾರೆ. ಇಂತಹ ಘಟನೆಯನ್ನು ಯಾರೂ ಊಹಿಸಿರಲಿಲ್ಲ. ಶವಾಗಾರದಲ್ಲಿ ಈ ದೃಶ್ಯವನ್ನು ನೋಡಿದಾಗ ದುಃಖವಾಯಿತು” ಎಂದು ಅವರು ಭಾವುಕರಾಗಿ ನುಡಿದ ರು.
34,000 ಆಸನಗಳ ಸಾಮರ್ಥ್ಯದ ಚಿನ್ನಸ್ವಾಮಿ ಸ್ಟೇಡಿಯಂಗೆ ಸುಮಾರು 3 ಲಕ್ಷ ಜನ ಬಂದಿದ್ದರು. ಮೆಟ್ರೋ ಸಂಸ್ಥೆಯ ಮಾಹಿತಿಯ ಪ್ರಕಾರ, ಘಟನೆಯ ದಿನ ಬೆಳಗ್ಗೆ 9ರಿಂದ ರಾತ್ರಿ 11 ಗಂಟೆವರೆಗೆ 8.7 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ.
“ತನಿಖೆ ವರದಿ ಬಂದ ಬಳಿಕ ಎಲ್ಲಿ ಲೋಪವಾಗಿದೆ, ಯಾರ ತಪ್ಪು ಎಂಬುದು ಗೊತ್ತಾಗಲಿದೆ. ಆರ್‌ಸಿಬಿ ಮತ್ತು ಕೆಎಸ್‌ಸಿಎ ಜೊತೆ ಸಭೆ ನಡೆಸಿ, ತಾಂತ್ರಿಕ ವಿಚಾರಗಳನ್ನು ಡಿಜಿಪಿ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಪರಿಶೀಲಿಸಲಿದ್ದಾರೆ” ಎಂದು ಸಚಿವರು ತಿಳಿಸಿದರು.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಒತ್ತಿ ಹೇಳಿದ ಅವರು, ಇಂತಹ ದುರ್ಘಟನೆಗಳು ಮುಂದೆ ಆಗದಂತೆ ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.