ಬೆಂಗಳೂರಿನ ಗಿರಿನಗರದಲ್ಲಿ ಡಾಕ್ಟರ್ ಮನೆಯಲ್ಲಿ ಕಳ್ಳತನ; ಆರೋಪಿ ಬಂಧನ
ಬೆಂಗಳೂರು: ತಂದೆ-ತಾಯಿ ಇಲ್ಲದ ಕಾರಣ ದತ್ತು ಪಡೆದು ಸ್ವಂತ ಮಗನಂತೆ ಸಾಕಿದ್ದ ಯುವಕನೊಬ್ಬ ತನ್ನ ದೊಡ್ಡಮ್ಮನ ಮನೆಯಲ್ಲೇ ಕಳ್ಳತನ ಮಾಡಿದ ಆಘಾತಕಾರಿ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ. ಗಿರಿನಗರ ಪೊಲೀಸರು ಆರೋಪಿ ಪ್ರಥಮ್‌ನನ್ನು ಬಂಧಿಸಿ, 258 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಕೆರೆಹಳ್ಳಿಯ ಡಾಕ್ಟರ್ ಶಾಂತಿ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ಡಾಕ್ಟರ್ ಶಾಂತಿ ಅವರು ಗಿರಿನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು.
ತನಿಖೆ ವೇಳೆ ಮನೆಯಲ್ಲಿ ಯಾರೆಲ್ಲಾ ಆಗಮಿಸಿದ್ದರು ಎಂದು ಪರಿಶೀಲಿಸಿದಾಗ, ಮೊದಲಿಗೆ ಮನೆ ಕೆಲಸದವರ ಮೇಲೆ ಅನುಮಾನ ವ್ಯಕ್ತವಾಯಿತು. ಆದರೆ, ಡಾಕ್ಟರ್ ಶಾಂತಿ ಅವರ ತಂಗಿಯ ಮಗ ಪ್ರಥಮ್ ಇತ್ತೀಚೆಗೆ ಮನೆಗೆ ಬಂದು ಹೋಗಿರುವುದು ಗೊತ್ತಾಯಿತು. ಪ್ರಥಮ್ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು, ಪೊಲೀಸರು ಆತನ ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸಿದರು. ಈ ವೇಳೆ ಆತನ ಖಾತೆಗೆ ಇತ್ತೀಚೆಗೆ ದೊಡ್ಡ ಮೊತ್ತದ ಹಣ ಜಮೆಯಾಗಿರುವುದು ಕಂಡುಬಂದಿತು.
ಈ ಬಗ್ಗೆ ಸಂಶಯಗೊಂಡ ಪೊಲೀಸರು ಪ್ರಥಮ್‌ನನ್ನು ವಿಚಾರಣೆಗೆ ಒಳಪಡಿಸಿದಾಗ, ಆತ ತಾನೇ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡ. ಆರೋಪಿ ಪ್ರಥಮ್, ಡಾಕ್ಟರ್ ಶಾಂತಿ ಅವರ ತಂಗಿಯ ಮಗನಾಗಿದ್ದು, ಮಕ್ಕಳಿಲ್ಲದ ಕಾರಣ ಶಾಂತಿ ದಂಪತಿ ಆತನನ್ನು ದತ್ತು ಪಡೆದು ಸಾಕಿದ್ದರು. ಸ್ವಂತ ಮಗನಂತೆ ಚೆನ್ನಾಗಿ ನೋಡಿಕೊಂಡು, ಬಿಬಿಎ ವಿದ್ಯಾಭ್ಯಾಸವನ್ನೂ ಮಾಡಿಸಿದ್ದರು.
ಪ್ರಥಮ್ ಆಗಾಗ ದೊಡ್ಡಮ್ಮನ ಮನೆಗೆ ಭೇಟಿ ನೀಡುತ್ತಿದ್ದ. ಒಮ್ಮೆ ಶಾಂತಿ ದಂಪತಿ ಮುಂಬೈಗೆ ತೆರಳಿದ್ದ ವೇಳೆ, ಪ್ರಥಮ್ ಮನೆಯಲ್ಲಿ ಉಳಿದುಕೊಂಡಿದ್ದಾಗ ಕಳ್ಳತನ ಮಾಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಸದ್ಯ, ಬಂಧಿತ ಆರೋಪಿಯಿಂದ 258 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿರುವ ಪೊಲೀಸರು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.












