ಬೆಂಗಳೂರು: ನಾಡಿನ ಪ್ರಸಿದ್ಧ ಧಾರ್ಮಿಕ ಮತ್ತು ಶ್ರದ್ಧಾ ಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರ ಹಾಗೂ ಅಪಪ್ರಚಾರದ ವಿರುದ್ಧ ಧ್ವನಿಯೆತ್ತಲು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ‘ಧರ್ಮರಕ್ಷಣೆಗಾಗಿ ಧರ್ಮಸ್ಥಳ ಯಾತ್ರೆ’ಯನ್ನು ಇಂದು ಆಯೋಜಿಸಲಾಗಿತ್ತು. ಈ ಯಾತ್ರೆಗೆ ಬಿಜೆಪಿ ಯುವನಾಯಕ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ಚಾಲನೆ ನೀಡಿದರು.
ಸಾವಿರಾರು ಬಿಜೆಪಿ ಕಾರ್ಯಕರ್ತರು ಮತ್ತು ಧರ್ಮಸ್ಥಳದ ಭಕ್ತರು ಈ ಯಾತ್ರೆಯಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಈ ಸಂದರ್ಭದಲ್ಲಿ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ, ಬಸವನಗುಡಿ ಶಾಸಕ ರವಿ ಸುಬ್ರಮಣ್ಯ, ಬಿಜೆಪಿ ಮುಖಂಡರಾದ ಉಮೇಶ್ ಶೆಟ್ಟಿ, ಶ್ರೀಧರ್ ರೆಡ್ಡಿ, ಸಂಗಾತಿ ವೆಂಕಟೇಶ್ ಸೇರಿದಂತೆ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.
ಈ ಯಾತ್ರೆಯ ಮೂಲಕ ಧರ್ಮಸ್ಥಳದ ಪವಿತ್ರತೆಯನ್ನು ಕಾಪಾಡುವ ಸಂಕಲ್ಪವನ್ನು ಬಿಜೆಪಿ ಕಾರ್ಯಕರ್ತರು ವ್ಯಕ್ತಪಡಿಸಿದರು. ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ, ಧಾರ್ಮಿಕ ಕೇಂದ್ರದ ಘನತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.