ಧರ್ಮಸ್ಥಳದಲ್ಲಿ ಸಂಚಲನ ಸೃಷ್ಟಿಸಿರುವ ತಲೆಬುರುಡೆ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಗಂಭೀರ ಚರ್ಚೆಗೆ ಸಿದ್ಧವಾಗಿದೆ. ಈ ಪ್ರಕರಣದಲ್ಲಿ ಷಡ್ಯಂತ್ರ ನಡೆದಿರುವ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸದನದಲ್ಲಿ ಸತ್ಯವನ್ನು ಜನತೆಗೆ ತಿಳಿಸಲಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಧರ್ಮಸ್ಥಳದ ಧಾರ್ಮಿಕ ಕ್ಷೇತ್ರಕ್ಕೆ ಅಪಪ್ರಚಾರ ಮಾಡುವ ಯಾವುದೇ ಷಡ್ಯಂತ್ರಕ್ಕೆ ಅವಕಾಶ ನೀಡದಿರುವ ಬಗ್ಗೆ ಮುಖ್ಯಮಂತ್ರಿಗಳು ಕೂಡ ಬದ್ಧತೆ ವ್ಯಕ್ತಪಡಿಸಿದ್ದಾರೆ. ಆರೋಪಗಳು ಸುಳ್ಳಾಗಿದ್ದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. “ಕಾನೂನನ್ನು ಎಲ್ಲರೂ ಕಾಪಾಡಬೇಕು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು. ತೇಜೋವಧೆ ಮಾಡುವ ಕೆಲಸಕ್ಕೆ ಯಾರೂ ಕೈಹಾಕಬಾರದು,” ಎಂದು ಡಿಸಿಎಂ ಶಿವಕುಮಾರ್ ಒತ್ತಿ ಹೇಳಿದ್ದಾರೆ.
ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ, 13ನೇ ಗುಂಡಿಯಲ್ಲಿ ಯಾವುದೇ ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ಸೋಮವಾರದಂದು ಗುಂಡಿ ಅಗೆತಕ್ಕೆ ಬ್ರೇಕ್ ಹಾಕುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಆದರೆ, ಎಸ್‌ಐಟಿ ತನಿಖೆಯನ್ನು ಮುಂದುವರೆಸಲಿದೆ ಎಂದು ತಿಳಿದುಬಂದಿದೆ. ಅನಾಮಿಕ ವ್ಯಕ್ತಿಯ ಮೇಲಿನ ಆರೋಪಗಳ ಬಗ್ಗೆ ಕೂಡ ತನಿಖೆಯನ್ನು ಆಳವಾಗಿ ನಡೆಸಲಾಗುವುದು.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೋಮವಾರ ಸದನದಲ್ಲಿ ಈ ಬಗ್ಗೆ ಉತ್ತರ ನೀಡಲಿದ್ದು, ಸರ್ಕಾರದ ಅಂತಿಮ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈಗಾಗಲೇ ಮಧ್ಯಂತರ ವರದಿಯು ಸರ್ಕಾರದ ಕೈಗೆ ಸೇರಿದ್ದು, ಧರ್ಮಸ್ಥಳ ಪ್ರಕರಣಕ್ಕೆ ಮುಕ್ತಿ ಹಾಡುವ ನಿಟ್ಟಿನಲ್ಲಿ ಸರ್ಕಾರದ ಚಿಂತನೆ ನಡೆದಿದೆ.
“ನಾನು ಧರ್ಮಸ್ಥಳದ ಭಕ್ತಿ, ಶ್ರದ್ಧೆ ಮತ್ತು ಆಚರಣೆಗಳನ್ನು ಹತ್ತಿರದಿಂದ ನೋಡಿದ್ದೇನೆ. ಈ ಕ್ಷೇತ್ರದ ವಿರುದ್ಧ ಯಾವುದೇ ಷಡ್ಯಂತ್ರಕ್ಕೆ ಅವಕಾಶ ನೀಡುವುದಿಲ್ಲ,” ಎಂದು ಡಿಸಿಎಂ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣದ ಸತ್ಯಾಸತ್ಯತೆ ತನಿಖೆಯಿಂದ ಬಯಲಿಗೆ ಬರಲಿದ್ದು, ಸರ್ಕಾರದ ಕಾನೂನುಬದ್ಧ ಕ್ರಮಗಳಿಗೆ ಎಲ್ಲರೂ ಕಾಯಬೇಕಿದೆ.