ಉಜಿರೆ: 2010ರಲ್ಲಿ ಧರ್ಮಸ್ಥಳದ ಶರಾವತಿ ಲಾಡ್ಜ್‌ನಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಐಟಿ ತನಿಖೆಗೆ ಆಗ್ರಹಿಸಿ, ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣನವರ್ ಉಜಿರೆಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ.
2010ರಲ್ಲಿ ಶರಾವತಿ ಲಾಡ್ಜ್‌ನಲ್ಲಿ ಓರ್ವ ಮಹಿಳೆಯ ಶವ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಸಿಪಿಐ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಯಬೇಕಿತ್ತಾದರೂ, ಕೇವಲ ಎಎಸ್‌ಐ ಮಟ್ಟದಲ್ಲಿ ತನಿಖೆ ನಡೆದಿದೆ ಎಂದು ಆರೋಪಿಸಲಾಗಿದೆ. ಶವವನ್ನು ಕೊಲೆಯಾದ ದಿನವೇ, ಅಂದರೆ ಆಗಸ್ಟ್ 6 ರಂದು ದಫನ ಮಾಡಲಾಗಿದ್ದು, ಕನಿಷ್ಠ 15 ದಿನ ಶವಾಗಾರದಲ್ಲಿ ಇಡಬೇಕೆಂಬ ಕಾನೂನು ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ಹೋರಾಟಗಾರರು ದೂರಿದ್ದಾರೆ.
ಮಹಿಳೆಯ ಶವವನ್ನು ಅಕ್ರಮವಾಗಿ ವಿಲೇವಾರಿ ಮಾಡಲಾಗಿದ್ದು, ಇದು ಸಾಕ್ಷ್ಯ ನಾಶದ ಷಡ್ಯಂತ್ರವಾಗಿದೆ ಎಂದು ಆರೋಪಿಸಿರುವ ಮಹೇಶ್ ಶೆಟ್ಟಿ, “ಲಾಡ್ಜ್‌ನಲ್ಲಿ ಗುರುತಿನ ಚೀಟಿ ಪಡೆಯದೆ ಯಾರನ್ನೂ ಬಿಡುವುದಿಲ್ಲ. ಹಾಗಾದರೆ ಶವ ಅಪರಿಚಿತವೆಂದು ಹೇಗೆ ಹೇಳಬಹುದು?” ಎಂದು ಪ್ರಶ್ನಿಸಿದ್ದಾರೆ. ಇದರ ಜೊತೆಗೆ, ಶವವನ್ನು ದಹನ ಮಾಡುವ ಪ್ರಯತ್ನವೂ ನಡೆದಿತ್ತು ಎಂದು ಆರೋಪಿಸಲಾಗಿದೆ, ಇದು ಕಾನೂನಿನ ಉಲ್ಲಂಘನೆಯಾಗಿದೆ.
ಹೋರಾಟಗಾರರು, ಧರ್ಮಸ್ಥಳ ಗ್ರಾಮ ಪಂಚಾಯತ್‌ನಿಂದ ಶವ ದಫನದ ಜಾಗವನ್ನು ತೋರಿಸುವಂತೆ ಒತ್ತಾಯಿಸಿದ್ದಾರೆ. ಜೊತೆಗೆ, ಪಂಚಾಯತ್ ಅಧಿಕಾರಿಗಳು, ಶರಾವತಿ ಲಾಡ್ಜ್‌ನ ರೂಂ ಬಾಯ್, ಮ್ಯಾನೇಜರ್ ಸೇರಿದಂತೆ ಸಂಬಂಧಿತರನ್ನು ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.
“ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಎಸ್‌ಐಟಿಗೆ ಹೆಚ್ಚಿನ ಅಧಿಕಾರ ನೀಡಿ ಸಂಪೂರ್ಣ ತನಿಖೆಗೆ ಆದೇಶಿಸಬೇಕು. ದೇವಸ್ಥಾನಕ್ಕೆ ಅಪಪ್ರಚಾರ ಎಂಬ ಸುಳ್ಳು ಆರೋಪದ ಮೂಲಕ ತನಿಖೆಗೆ ತಡೆಯೊಡ್ಡುವ ಷಡ್ಯಂತ್ರವನ್ನು ತಡೆಯಬೇಕು” ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.
ಈ ಪ್ರಕರಣದ ಕುರಿತು ಎಸ್‌ಐಟಿ ತನಿಖೆಗೆ ಒತ್ತಡ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರದ ಮುಂದಿನ ಕ್ರಮ ಕುತೂಹಲ ಕೆರಳಿಸಿದೆ.