ಮಂಗಳೂರು, ಏಪ್ರಿಲ್ 20:
“ನಮಗೆ ಧರ್ಮ ಬೇಕು, ಧರ್ಮಕ್ಕೆ ನಾವಲ್ಲ. ನಾವು ಧರ್ಮವನ್ನು ಕಾಪಾಡಬೇಕು,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಭಾನುವಾರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಈ ಧರ್ಮಕ್ಷೇತ್ರವು ಜನಸೇವೆ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಗಳ ಮೂಲಕ ದೇಶದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಇಂತಹ ಕ್ಷೇತ್ರಗಳಿಗೆ ಸಹಕಾರ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ,” ಎಂದರು.
ರಾಜ್ಯದ ಕರಾವಳಿ ಭಾಗದ ಮಹತ್ವವನ್ನು ಉಲ್ಲೇಖಿಸುತ್ತಾ, “ಕರಾವಳಿ ಭಾಗ ನಮ್ಮ ರಾಜ್ಯದ ಪ್ರಮುಖ ಅಂಗವಾಗಿದೆ. ಮಾನವನಿಗೆ ದೇಹದ ಪ್ರತಿಯೊಂದು ಅಂಗವೂ ಮುಖ್ಯವಾಗಿರುವಂತೆ, ಈ ಕರಾವಳಿ ಭಾಗವೂ ನಮ್ಮ ಅಭಿವೃದ್ಧಿಗೆ ಅವಿಭಾಜ್ಯವಾಗಿದೆ,” ಎಂದು ಹೇಳಿದರು.