ಧಾರವಾಡ: ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ 9 ಕೋಟಿ 70 ಲಕ್ಷ ರೈತರ ಖಾತೆಗೆ ₹20,500 ಕೋಟಿ ಮೊತ್ತವನ್ನು ವರ್ಗಾಯಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಜೋಶಿ, ರೈತರು ಕಿಸಾನ್ ಕ್ರೆಡಿಟ್ ಕಾರ್ಡ್, ಪಿಎಮ್-ಕುಸುಮ್, ಕೃಷಿ ಸಿಂಚಯ ಯೋಜನೆಗಳಂತಹ ಧನಸಹಾಯ ಯೋಜನೆಗಳ ಸದುಪಯೋಗ ಪಡೆದು ಕೃಷಿಯಲ್ಲಿ ಪ್ರಗತಿ ಸಾಧಿಸಬೇಕು ಎಂದು ಕರೆ ನೀಡಿದರು. ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ ವರ್ಷಕ್ಕೆ ₹6000 ಮೂರು ಕಂತುಗಳಲ್ಲಿ ರೈತರ ಖಾತೆಗೆ ನೇರವಾಗಿ ಜಮೆಯಾಗುತ್ತಿದ್ದು, ಈ ಹಣವನ್ನು ಕೃಷಿ ಪರಿಕರಗಳ ಖರೀದಿ, ಆಧುನಿಕ ತಂತ್ರಜ್ಞಾನ ಅಳವಡಿಕೆ ಮತ್ತು ಕುಟುಂಬದ ಉನ್ನತಿಗಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.
ಸರಕಾರವು ರೈತರಿಗಾಗಿ ಬಲಿಷ್ಠ ಕಾನೂನು ವ್ಯವಸ್ಥೆಯನ್ನು ರೂಪಿಸಿದ್ದು, ಒಪ್ಪಂದ ಕೃಷಿಯ ಮೂಲಕ ಕಂಪನಿಗಳು ರೈತರಿಗೆ ಆಧುನಿಕ ತಂತ್ರಜ್ಞಾನ, ಮಾರ್ಗದರ್ಶನ ಮತ್ತು ಉತ್ತಮ ಬೆಲೆಯನ್ನು ನೀಡುತ್ತಿವೆ ಎಂದು ಸಚಿವರು ಒತ್ತಿ ಹೇಳಿದರು. ಈ ಪ್ರಯೋಜನವನ್ನು ಎಲ್ಲ ರೈತರು ಪಡೆಯಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ 1342 ರೈತರು, ರೈತ ಮಹಿಳೆಯರು, ಕೃಷಿಸಖಿಯರು, ವಿದ್ಯಾರ್ಥಿಗಳು ಮತ್ತು ಕೃಷಿ ವಿಜ್ಞಾನಿಗಳು ಭಾಗವಹಿಸಿದ್ದರು.