ಬೆಂಗಳೂರು, ಮಾರ್ಚ್ 13 (ಕರ್ನಾಟಕ ವಾರ್ತೆ):
ರಾಜ್ಯದಲ್ಲಿ ನಕಲಿ ಔಷಧ ಮಾರಾಟ ಜಾಲವನ್ನು ಹತ್ತಿಕ್ಕಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಔಷಧ ಮಾರಾಟಗಾರರ ವಿರುದ್ಧ ಕಾರ್ಯಾಚರಣೆ ನಡೆಸಿ 2023-24ನೇ ಸಾಲಿನಲ್ಲಿ 10 ಮೊಕದ್ದಮೆಗಳನ್ನು ಹಾಗೂ 2024-25ನೇ ಸಾಲಿನಲ್ಲಿ 5 ಮೊಕದ್ದಮೆಗಳನ್ನು ಔಷಧ ಮತ್ತು ಕಾಂತಿವರ್ಧಕ ನಿಯಮಾವಳಿಗಳ ಅಡಿಯಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ ಹಾಗೂ 87 ಫಾರ್ಮಸಿಗಳನ್ನು ಸಸ್ಪೆಂಡ್ ಮಾಡಿ 3 ಪಾರ್ಮಸಿಗಳನ್ನು ಮುಚ್ಚಲು ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.
ಇಂದು ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಸದಸ್ಯ ಡಾ.ಅಶ್ವಥ್ ನಾರಾಯಣ ಅವರ ಪ್ರಶ್ನೆಗೆ ಉತ್ತರಿಸುತ್ತಾ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಖಂಡಗಳಲ್ಲಿ ಈ ನಕಲಿ ಔಷಧ ತಯಾರಿಕ ಘಟಕಗಳು ಇವೆ. ನಕಲಿ ಔಷದಿ ಜಾಲವು ರಾಜ್ಯದ ಸಮಸ್ಯೆಯಲ್ಲದೇ ರಾಷ್ಟ್ರಮಟ್ಟದ ಸಮಸ್ಯೆಯಾಗಿದ್ದು ಇದನ್ನು ಹತ್ತಿಕ್ಕುವ ಪ್ರಯತ್ನವನ್ನು ರಾಜ್ಯ ಸರ್ಕಾರ ನಡೆಸಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕೂಡ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ರಾಜ್ಯದ ಕೆಎಸ್ಎಂಎಸ್ ಸಿಎಲ್ ಸಂಸ್ಥೆಗೆ ಆರೋಗ್ಯ ಇಲಾಖೆ ಸಲ್ಲಿಸಿರುವ ಹಿಂದಿನ ವಾರ್ಷಿಕ Annual indent 2022-23 ಅನುಮೋದಿತವಾಗಿರುವ 732 ಔಷಧಿಗಳಲ್ಲಿ 475 ಔಷಧಿಗಳಿಗೆ ಖರೀದಿ ಆದೇಶ ನೀಡಿ ಔಷಧಗಳನ್ನು ಎಲ್ಲಾ ಔಷಧ ಉಗ್ರಾಣಗಳಿಗೆ ಸರಬರಾಜು ಮಾಡಲಾಗಿದೆ. ಉಗ್ರಾಣಕ್ಕೆ ಸರಬರಾಜುಗೊಂಡು ಆರೋಗ್ಯ ಸಂಸ್ಥೆಗಳ ಬೇಡಿಕೆಯಂತೆ ವಿತರಿಸಿ, ದಾಸ್ತಾನು ಕೊರತೆ ಆಗಿರುವ Essention-91, Desirable-40 ಸೇರಿ 131 ಔಷಧಿಗಳ ಕೊರತೆಯಾಗಿದೆ. ಜನಸಾಮಾನ್ಯರಿಗೆ ಔಷಧಿಯನ್ನು ನೀಡುವುದು ಮೂಲ ಜವಬ್ದಾರಿಯಾಗಿದ್ದು ಈಗಾಗಲೇ ಅಗತ್ಯವಿರುವ ಕಡೆಗೆ ಔಷಧಿಗಳನ್ನು ಸಬರರಾಜು ಮಾಡಲಾಗುತ್ತಿದೆ. ಕೆಲವೊಂದು ಕಡೆ ಔಷಧಗಳ ಕೊರತೆಯಾದರೆ ಬೇರೆ ಜಿಲ್ಲೆಗಳಿಂದ ಪಡೆದು ನೀಡಲು ಕ್ರಮ ವಹಿಸಲಾಗುತ್ತಿದೆ ಎಂದು ಉತ್ತರಿಸಿದರು.












