ಬೆಂಗಳೂರು: ನಗರಗಳನ್ನು ಆಧುನಿಕ ಬೆಳವಣಿಗೆಯ ಕೇಂದ್ರಗಳಾಗಿ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ₹1 ಲಕ್ಷ ಕೋಟಿಯ ‘ಅರ್ಬನ್ ಚಾಲೆಂಜ್ ಫಂಡ್’ ಘೋಷಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ವೇಳೆ ಈ ಯೋಜನೆ ವಿವರಿಸಿದರು.
ಈ ನಿಧಿ, ನಗರ ಪುನರ್ ವಿಕಸನ, ಮೂಲಸೌಕರ್ಯ ಮತ್ತು ನಗರ ಯೋಜನೆಗೆ ಹೊಸ ತಂತ್ರಗಳ ಮೂಲಕ ನೆರವಾಗಲಿದ್ದು, 2025-26ರ ಸಾಲಿನಲ್ಲಿ ₹10,000 ಕೋಟಿ ಹಂಚಿಕೆ ಪ್ರಸ್ತಾವಿಸಲಾಗಿದೆ. ಸರ್ಕಾರವು ಈ ನಿಧಿಯ ಮೂಲಕ ನಗರ ಅಭಿವೃದ್ಧಿಗೆ ಬ್ಯಾಂಕ್ ಸಾಲ, ಬಾಂಡ್‌ಗಳು ಹಾಗೂ ಪಬ್ಲಿಕ್-ಪ್ರೈವೇಟ್ ಪಾಲುದಾರಿಕೆ (PPP) ಮಾದರಿಯಲ್ಲಿ ಹಣಕಾಸು ವ್ಯವಸ್ಥೆ ಕಲ್ಪಿಸುವ ಗುರಿಯನ್ನು ಹೊಂದಿದೆ.
ಜಿಯೋಸ್ಪೇಷಿಯಲ್ ಮಿಷನ್
ಭೂಮಿಯ ಭೌಗೋಳಿಕ ಮಾಹಿತಿ, ಭೂ ಮಾಪನ, ಭೂ ದಾಖಲೆಗಳ ಸುಧಾರಣೆ, ನಗರ ಯೋಜನೆಗೆ ನೆರವಾಗುವ ನಿಟ್ಟಿನಲ್ಲಿ ‘ರಾಷ್ಟ್ರೀಯ ಜಿಯೋಸ್ಪೇಷಿಯಲ್ ಮಿಷನ್’ ಘೋಷಿಸಲಾಗಿದೆ. ಈ ಮೂಲಕ ಭೂಮಿಯ ಡಿಜಿಟಲ್ ದಾಖಲೆಗಳನ್ನು ಸುಗಮಗೊಳಿಸಲು ಸರ್ಕಾರ ಮುಂದಾಗಿದೆ.
ಗಿಗ್ ಉದ್ಯೋಗಿಗಳಿಗೆ ದೊಡ್ಡ ಸೌಲಭ್ಯ
ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸೇವೆ ಒದಗಿಸುವ ಗಿಗ್ ಉದ್ಯೋಗಿಗಳಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇ-ಶ್ರಮ್ ಪೋರ್ಟಲ್‌ನಲ್ಲಿ ಅವರ ನೋಂದಣಿ ಮತ್ತು ಗುರುತಿನ ಚೀಟಿಗಳನ್ನು ನೀಡಲು ಅವಕಾಶ ಮಾಡಲಾಗಿದೆ. ಇದರ ಜತೆಗೆ, ಸುಮಾರು 1 ಕೋಟಿ ಗಿಗ್ ಉದ್ಯೋಗಿಗಳಿಗೆ ‘ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ’ ಅಡಿಯಲ್ಲಿ ಆರೋಗ್ಯ ಸೇವೆ ಒದಗಿಸಲಾಗುವುದು.
UPI ಲಿಂಕ್ಡ್ ಕ್ರೆಡಿಟ್ ಕಾರ್ಡ್
ಬೀದಿ ವ್ಯಾಪಾರಿಗಳಿಗೆ ಸುಲಭ ಸಾಲ ಸೌಲಭ್ಯ ಒದಗಿಸುವ ‘ಪ್ರಧಾನಮಂತ್ರಿ ಸ್ವನಿಧಿ ಯೋಜನೆ’ ಅಡಿಯಲ್ಲಿ ಈಗ ₹30,000 ಮಿತಿಯ ಯುಪಿಐ ಲಿಂಕ್ಡ್ ಕ್ರೆಡಿಟ್ ಕಾರ್ಡ್ ನೀಡಲು ನಿರ್ಧರಿಸಲಾಗಿದೆ. ಈ ಯೋಜನೆ ಈಗಾಗಲೇ 68 ಲಕ್ಷಕ್ಕೂ ಹೆಚ್ಚು ಬೀದಿ ವ್ಯಾಪಾರಿಗಳಿಗೆ ಲಾಭವನ್ನು ನೀಡಿದ್ದು, ಹೊಸ ಪರಿಷ್ಕರಣೆಗಳಿಂದ ಇನ್ನಷ್ಟು ಜನರಿಗೆ ಪ್ರಯೋಜನವಾಗಲಿದೆ.
ಮಧ್ಯಮವರ್ಗದವರಿಗೆ ವಸತಿ ಯೋಜನೆ
ಸ್ವಾಮಿ (SWAMIH) ವಸತಿ ಯೋಜನೆಯಡಿ 50,000ಕ್ಕೂ ಹೆಚ್ಚು ಅಪೂರ್ಣ ವಸತಿ ಯೋಜನೆಗಳು ಪೂರ್ಣಗೊಂಡಿದ್ದು, 2025ರೊಳಗೆ ಇನ್ನೂ 40,000 ಅಪಾರ್ಟ್‌ಮೆಂಟ್‌ಗಳು ಲಭ್ಯವಾಗಲಿವೆ. ಬಾಡಿಗೆ ಮತ್ತು ಗೃಹ ಸಾಲದ ಬಡ್ಡಿದರದ ಹೊರೆ ತಗ್ಗಿಸಲು SWAMIH ಫಂಡ್-2 ಸ್ಥಾಪಿಸಲು ಸರ್ಕಾರ ಯೋಜನೆ ರೂಪಿಸಿದೆ. ಈ ಹೊಸ ನಿಧಿಯು 1 ಲಕ್ಷಕ್ಕೂ ಹೆಚ್ಚು ವಸತಿ ಘಟಕಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ.
ಈ ಬಜೆಟ್ ಮೂಲಕ ನಗರ ಅಭಿವೃದ್ಧಿ, ಗಿಗ್ ಉದ್ಯೋಗಿಗಳು, ಬೀದಿ ವ್ಯಾಪಾರಿಗಳು, ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಉಲ್ಲೇಖನೀಯ ನೆರವು ಒದಗಿಸಲು ಸರ್ಕಾರ ಮುಂದಾಗಿದೆ ಎಂದು ಹಣಕಾಸು ಸಚಿವೆ ಹೇಳಿದರು.