ಗಡಿ ಭಾಗದಲ್ಲಿ ಉಂಟಾಗಿರುವ ಯುದ್ಧದ ವಾತಾವರಣದ ಹಿನ್ನೆಲೆಯಲ್ಲಿ ನಗರದಲ್ಲಿ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಲು ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಸೂಚನೆ ನೀಡಿದ್ದಾರೆ. ಮಾಸಿಕ ಕವಾಯತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ಆತಂಕ ಉಂಟಾಗದಂತೆ ತಿಳುವಳಿಕೆ ನೀಡುವುದರ ಜೊತೆಗೆ ಸುಳ್ಳು ಸುದ್ದಿಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
“ಗಡಿ ಭಾಗದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ಗಂಭೀರವಾಗಿ ಪರಿಗಣಿಸಿ, ಅವುಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮಕ್ಕೆ ಸೂಚನೆ ನೀಡಲಾಗಿದೆ,” ಎಂದು ಆಯುಕ್ತರು ಹೇಳಿದರು.
ಸಾರ್ವಜನಿಕರಿಗೆ ಸರಿಯಾದ ಮತ್ತು ವಾಸ್ತವಿಕ ಮಾಹಿತಿಯನ್ನು ಒದಗಿಸುವಂತೆ ಎಲ್ಲಾ ಡಿಸಿಪಿ, ಎಸಿಪಿಗಳಿಗೆ ಸೂಚಿಸಿರುವ ಆಯುಕ্তರು, “ಮೊದಲು ನಾವು ಸರಿಯಾದ ಮಾಹಿತಿಯನ್ನು ಪಡೆದುಕೊಂಡು, ನಂತರ ಅದನ್ನು ಸಾರ್ವಜನಿಕರಿಗೆ ತಲುಪಿಸಬೇಕು. ಜನರು ಆವೇಶಕ್ಕೆ ಒಳಗಾಗದಂತೆ ಮನವರಿಕೆ ಮಾಡಬೇಕು,” ಎಂದು ಒತ್ತಿ ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದ ಅವರು, ಅಗತ್ಯ ಸಾಮಗ್ರಿಗಳ ಶೇಖರಣೆಗೆ ಸಂಬಂಧಿಸಿದಂತೆ ಕೇಳಿಬರುವ ಮಾಹಿತಿಯ ಬಗ್ಗೆಯೂ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದರು. ಜೊತೆಗೆ, ಸಾಮಾನ್ಯ ಭದ್ರತೆಯನ್ನು ಎಲ್ಲೆಡೆ ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದರು.
ಮಾಕ್ ಡ್ರಿಲ್‌ಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಒತ್ತಾಯಿಸಿದ ಆಯುಕ್ತರು, “ಈ ಸನ್ನಿವೇಶದಲ್ಲಿ ಎಲ್ಲರೂ ಜಾಗರೂಕರಾಗಿರಬೇಕು. ಸಿಬ್ಬಂದಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಸಾರ್ವಜನಿಕರ ಸಹಕಾರದೊಂದಿಗೆ ಶಾಂತಿ ಕಾಪಾಡಲು ಕಟಿಬದ್ಧರಾಗಿದ್ದೇವೆ,” ಎಂದು ಹೇಳಿದರು.