ಬೆಂಗಳೂರು, ಏಪ್ರಿಲ್ 26: ಕನ್ನಡ ಚಿತ್ರರಂಗದ ನಟಿ ಹರ್ಷವರ್ಧಿನಿ ರನ್ಯಾ ರಾವ್‌ಗೆ ಆದಾಯ ಗುಪ್ತಚರ ನಿರ್ದೇಶನಾಲಯ (DRI) ಆಘಾತಕಾರಿ ಕ್ರಮ ಕೈಗೊಂಡಿದೆ. ವಿದೇಶಿ ವಿನಿಮಯ ಸಂರಕ್ಷಣೆ ಹಾಗೂ ಕಳ್ಳ ಸಾಗಾಣೆ ಚಟುವಟಿಕೆ ನಿಯಂತ್ರಣ ಕಾಯ್ದೆ (ಕಾಫಿಪೊಸಾ) ಅಡಿಯಲ್ಲಿ ರನ್ಯಾ ವಿರುದ್ಧ ಕಾನೂನು ಕ್ರಮ ಜಾರಿಗೊಳಿಸಲಾಗಿದೆ. ಈ ಕಾಯ್ದೆಯ ಪ್ರಕಾರ, ರನ್ಯಾ ಒಂದು ವರ್ಷದವರೆಗೆ ಜೈಲಿನಲ್ಲಿ ಇರಬೇಕಾಗುತ್ತದೆ ಮತ್ತು ಈ ಅವಧಿಯಲ್ಲಿ ಜಾಮೀನು ಪಡೆಯುವ ಸಾಧ್ಯತೆ ಇರುವುದಿಲ್ಲ.
ರನ್ಯಾ ಜೊತೆಗೆ ಅವರ ಸ್ನೇಹಿತರಾದ ತರುಣ್ ಮತ್ತು ಸಾಹಿಲ್ ಜೈನ್ ಕೂಡ ಈ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದಾರೆ. ಮಾರ್ಚ್ ತಿಂಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) 14.2 ಕೆಜಿ ಅಕ್ರಮ ಚಿನ್ನದೊಂದಿಗೆ ರನ್ಯಾ ಸಿಕ್ಕಿಬಿದ್ದಿದ್ದರು. ತನಿಖೆಯಲ್ಲಿ ಇದುವರೆಗೆ ಒಟ್ಟು 49.6 ಕೆಜಿ ಅಕ್ರಮ ಚಿನ್ನವನ್ನು ಸಾಗಾಣೆ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿದ DRI, ಕಾಫಿಪೊಸಾ ಕಾಯ್ದೆಯನ್ನು ಪ್ರಯೋಗಿಸಿದೆ.
ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರನ್ಯಾ, ಜಾಮೀನು ಪಡೆಯಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠವು ರನ್ಯಾ ಹಾಗೂ ತರುಣ್‌ರ ಜಾಮೀನು ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ. ರನ್ಯಾ ಪರವಾಗಿ ಹಿರಿಯ ವಕೀಲ ಸಂದೇಶ್ ಚೌಟ ಮತ್ತು ತರುಣ್ ಪರವಾಗಿ ವಕೀಲ ಬಿಪಿನ್ ಹೆಗ್ಡೆ ವಾದ ಮಂಡಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನಂತರ ಕೋರ್ಟ್ ಈ ತೀರ್ಪು ನೀಡಿದೆ.
ಕಾಫಿಪೊಸಾ ಕಾಯ್ದೆಯು ವೃತ್ತಿಪರ ಕಳ್ಳಸಾಗಣೆದಾರರ ವಿರುದ್ಧ ಬಳಸಲಾಗುವ ಕಠಿಣ ಕಾನೂನಾಗಿದ್ದು, ಇದರಡಿ ಆರೋಪಿಗಳಿಗೆ ಒಂದು ವರ್ಷದವರೆಗೆ ಜಾಮೀನು ದೊರೆಯುವುದಿಲ್ಲ. ಈ ಹಿನ್ನೆಲೆಯಲ್ಲಿ ರನ್ಯಾ ಮತ್ತು ಆಕೆಯ ಸಹಚರರಿಗೆ ಕಠಿಣ ಶಿಕ್ಷೆ ಎದುರಾಗಿದೆ.