ಗೋಕರ್ಣ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗೋಕರ್ಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ತಮ್ಮ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಒಪ್ಪಂದವೊಂದು ಇದ್ದು, ಹೈಕಮಾಂಡ್ ಅದಕ್ಕೆ ಕಾರಣವಾಗಿದೆ ಎಂದು ಹೇಳಿದರು.
“ನನ್ನ ಹಾಗೂ ಸಿಎಂ ನಡುವೆ ಒಂದು ಒಪ್ಪಂದವಾಗಿದೆ. ಹೈಕಮಾಂಡ್ ಒಪ್ಪಂದಕ್ಕೆ ತಂದಿದೆ. ಆ ಪ್ರಕಾರ ನಾವಿಬ್ಬರೂ ನಡೆದುಕೊಂಡು ಹೋಗುತ್ತೇವೆ” ಎಂದು ಡಿಸಿಎಂ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಎರಡೂವರೆ ವರ್ಷದ ಒಪ್ಪಂದ ಇಲ್ಲ ಎಂದು ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿ, “ನಾನು ಯಾವತ್ತೂ ಅವರು ಐದು ವರ್ಷ ಇರಲ್ಲ ಎಂದು ಹೇಳಿಲ್ಲ. ಹೈಕಮಾಂಡ್ ಅವರ ಪರವಲ್ಲ ಎಂದು ಹೇಳಿಲ್ಲ. ಹೈಕಮಾಂಡ್ ಅವರ ಪರ ಇರುವುದರಿಂದಲೇ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ” ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಸಿಎಂ ಬದಲಾವಣೆ ಕುರಿತು ಕೇಳಿದಾಗ, “ನೀವು ಆ ಬಗ್ಗೆ ಚರ್ಚೆ ಮಾಡುತ್ತಿದ್ದೀರಿ. ನಮ್ಮಲ್ಲಿ ಅದು ಇಲ್ಲ. ಪಕ್ಷ ಹೇಳಿದಂತೆ ನಾವು ಕೇಳುತ್ತೇವೆ” ಎಂದು ಅವರು ಹೇಳಿದರು.
ಗೋಕರ್ಣದಲ್ಲಿ ದೇವರ ದರ್ಶನ: ಹಸನ್ಮುಖಿಯಾಗಿ ತೆರಳುತ್ತೇನೆ ಎಂದ ಡಿಸಿಎಂ
ಗೋಕರ್ಣ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗೋಕರ್ಣಕ್ಕೆ ಭೇಟಿ ನೀಡಿ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವರ ಆಶೀರ್ವಾದ ಪಡೆದು ಹಸನ್ಮುಖಿಯಾಗಿ ತೆರಳುತ್ತಿದ್ದೇನೆ ಎಂದು ತಿಳಿಸಿದರು.
“ಇಂದು ಗೋಕರ್ಣಕ್ಕೆ ಬಂದು ದೇವರ ದರ್ಶನ ಭಾಗ್ಯ ಸಿಕ್ಕಿದೆ. ಐದು ವರ್ಷಗಳ ಹಿಂದೆ ಆಂದ್ಲೆ ಜಗದೇಶ್ವರಿ ತಾಯಿಯ ಬಳಿ ಬಂದು ಕುಟುಂಬದ ವಿಚಾರಕ್ಕಾಗಿ ಪ್ರಾರ್ಥನೆ ಮಾಡಿದ್ದೆ. ಮತ್ತೆ ಬರುವುದಾಗಿ ಹರಕೆ ಹೊತ್ತಿದ್ದೆ. ಅದರಂತೆ ಬಂದು ಜಗದೇಶ್ವರಿಗೆ ಪೂಜೆ ಸಲ್ಲಿಸಿ, ನನಗೆ ಹಾಗೂ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ” ಎಂದು ಅವರು ಹೇಳಿದರು.
ಕಳೆದ ಬಾರಿ ಬಂದಾಗ ಇಷ್ಟಾರ್ಥ ಸಿದ್ಧಿಯಾಗಿತ್ತು ಎಂದು ಹೇಳಿದ್ದೀರಿ, ಈ ಬಾರಿಯೂ ಆಗುವುದೇ ಎಂದು ಮಾಧ್ಯಮಗಳು ಕೇಳಿದಾಗ, “ಅದೆಲ್ಲವನ್ನು ನಾನು ಹೇಳುವುದಿಲ್ಲ. ಇದು ನನ್ನ ಹಾಗೂ ತಾಯಿಯ ಮಧ್ಯೆ ಇರುವ ವಿಚಾರ. ಭಕ್ತ ಹಾಗೂ ಭಗವಂತನ ನಡುವಣ ವಿಚಾರ. ವಿಘ್ನೇಶ್ವರನ ದರ್ಶನ ಪಡೆದಿದ್ದೇನೆ, ಮಹಾಬಲೇಶ್ವರನಿಗೆ ಪೂಜೆ ಮಾಡಿದ್ದೇನೆ, ಗಂಗಾಧರೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ” ಎಂದು ಡಿಸಿಎಂ ಉತ್ತರಿಸಿದರು.












