ಬೆಂಗಳೂರು: ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಕ್ಯಾಸ್ಥಾವಧಿಯಲ್ಲಿ 1.5 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಕರ್ನಾಟಕ ಪ್ರವಾಸೋದ್ಯಮ ಪಾಲಿಸಿ 2024-2029 ಅನ್ನು ಜಾರಿಗೆ ತರಲಾಗಿದ್ದು, ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಾವಿರ ಕೋಟಿಗಿಂತ ಹೆಚ್ಚು ಅನುದಾನ ಮೀಸಲಾಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ ತಾಜ್ ವೆಸ್ಟ್ ಎಂಡ್ ನಲ್ಲಿ ನಡೆದ “ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ-2025” ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ, ಕರ್ನಾಟಕದ ವೈವಿಧ್ಯಮಯ ಪ್ರವಾಸಿ ತಾಣಗಳನ್ನು ಜಾಗತಿಕವಾಗಿ ಪರಿಚಯಿಸುವುದು ಈ ಪಾಲಿಸಿಯ ಉದ್ದೇಶ ಎಂದರು.
ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಗ್ರ ಯೋಜನೆ
ರಾಜ್ಯವು ಐತಿಹಾಸಿಕ, ಸಾಂಸ್ಕೃತಿಕ, ಮತ್ತು ಪ್ರಕೃತಿ ಸಂಪತ್ತಿನಲ್ಲಿ ಶ್ರೀಮಂತವಾಗಿದ್ದು, “ಹಲವು ಜಗತ್ತು, ಒಂದು ರಾಜ್ಯ” ಎಂಬಂತೆ ವಿವಿಧ ಪ್ರವಾಸಿ ತಾಣಗಳನ್ನು ಹೊಂದಿದೆ. ಕರ್ನಾಟಕದ ಕಾಡುಗಳು, ಐತಿಹಾಸಿಕ ತಾಣಗಳು, ಜನಪದ ಸಂಸ್ಕೃತಿ, ಕಲೆ ಮತ್ತು ಸಾಂಸ್ಕೃತಿಕ ವೈಭವ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಸಾರಿಗೆ ವ್ಯವಸ್ಥೆ ಸುಧಾರಣೆಗೂ ಸರ್ಕಾರ ಪ್ರಾಧಾನ್ಯ ನೀಡಿದ್ದು, ವಿಮಾನಯಾನ, ರಸ್ತೆ, ರೈಲು ಸಂಪರ್ಕ ಸುಗಮಗೊಳಿಸುವ ಮೂಲಕ ಪ್ರವಾಸೋದ್ಯಮ ವೃದ್ಧಿಗೆ ಹೊಸ ಯುಗ ಆರಂಭಿಸಲು ಸರ್ಕಾರ ಬದ್ಧವಾಗಿದೆ.
ಜಾಗತಿಕ ಪ್ರವಾಸಿಗರನ್ನು ಸೆಳೆಯಲು ಪ್ರಾಧ್ಯಾನ
ಕರ್ನಾಟಕ ರಾಜ್ಯದಲ್ಲಿ 4 UNESCO ವಿಶ್ವ ಪರಂಪರೆಯ ತಾಣಗಳು, 35 ಕ್ಕೂ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳು, ಪ್ರಾಚೀನ ಗಿರಿಧಾಮಗಳು, ಆಧ್ಯಾತ್ಮಿಕ ಕೇಂದ್ರಗಳು, ಸಾಹಸ ತಾಣಗಳು ಹಾಗೂ ಆರೋಗ್ಯ ಪ್ರವಾಸೋದ್ಯಮ ಹಬ್‌ಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಪ್ರವಾಸೋದ್ಯಮ ವೃದ್ದಿಗಾಗಿ ರಾಜ್ಯ ಸರ್ಕಾರ ವಿಶೇಷ ಪ್ರಚಾರ ಅಭಿಯಾನಗಳು, ಅಂತಾರಾಷ್ಟ್ರೀಯ ಪ್ರದರ್ಶನಗಳು, ಪ್ರವಾಸೋದ್ಯಮ ಗೈಡ್‌ಗಳು ಹಾಗೂ ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.
ಈ ಮೂಲಕ ಕರ್ನಾಟಕ ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟಕ್ಕೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಸರ್ಕಾರ ತೊಡಗಿಸಿಕೊಂಡಿದ್ದು, ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಪ್ರವಾಸೋದ್ಯಮ ಪ್ರಮುಖ ಪಾತ್ರ ವಹಿಸುವ ವಿಶ್ವಾಸ ವ್ಯಕ್ತವಾಗಿದೆ.