ಬೆಂಗಳೂರು: ನಮ್ಮ ಮೆಟ್ರೋ, ಸಿಲಿಕಾನ್ ಸಿಟಿಯ ಜನರ ಜೀವನಾಡಿಯಾಗಿ ಲಕ್ಷಾಂತರ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ. ಆದರೆ, ಇತ್ತೀಚೆಗೆ ಮೆಟ್ರೋದಲ್ಲಿ ಮಹಿಳೆಯರ ಆಕ್ಷೇಪಾರ್ಹ ವಿಡಿಯೋಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಘಟನೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
“ಮೆಟ್ರೋ ಚಿಕ್ಸ್” (metro_chicks) ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ 13ಕ್ಕೂ ಹೆಚ್ಚು ವಿಡಿಯೋಗಳನ್ನು ಅಪರಿಚಿತ ವ್ಯಕ್ತಿಯೊಬ್ಬ ಹಂಚಿಕೊಂಡಿದ್ದಾನೆ. ಈ ಖಾತೆಗೆ 5,500ಕ್ಕೂ ಅಧಿಕ ಫಾಲೋವರ್ಸ್ ಇದ್ದು, ಕಳೆದ ಏಪ್ರಿಲ್ 11ರಿಂದ ವಿಡಿಯೋಗಳು ಅಪ್ಲೋಡ್ ಆಗಿವೆ. ಮೆಟ್ರೋ ರೈಲಿನ ಒಳಗೆ ಮತ್ತು ನಿಲ್ದಾಣಗಳಲ್ಲಿ ಈ ವಿಡಿಯೋಗಳನ್ನು ರೆಕಾರ್ಡ್ ಮಾಡಲಾಗಿದ್ದು, ಇದು ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಾರ್ವಜನಿಕರ ವಿರೋಧದ ನಂತರ ಈ ಖಾತೆಯಿಂದ ಎಲ್ಲಾ ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ. “ಮಹಿಳೆಯರ ಫೋಟೋ ಮತ್ತು ವಿಡಿಯೋಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿರುವುದು ಗಂಭೀರ ಅಪರಾಧವಾಗಿದೆ. ಈ ಪೇಜ್ನ ಮಾಲೀಕರು ಮತ್ತು ವಿಡಿಯೋ ಚಿತ್ರೀಕರಿಸಿದವರ ವಿರುದ್ಧ ತನಿಖೆ ಮುಂದುವರಿದಿದೆ,” ಎಂದು ಅವರು ಹೇಳಿದ್ದಾರೆ.
ಕೇಂದ್ರ ಬಿಜೆಪಿ ಸಂಸದ ಪಿ.ಸಿ. ಮೋಹನ್ ಈ ಘಟನೆಯನ್ನು “ಆಘಾತಕಾರಿ ಮತ್ತು ಭಯಾನಕ ಅಪರಾಧ” ಎಂದು ಬಣ್ಣಿಸಿ, ಬೆಂಗಳೂರು ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ನಮ್ಮ ಮೆಟ್ರೋದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಾತರಿಪಡಿಸಲು ಕಟ್ಟುನಿಟ್ಟಿನ ಕ್ರಮಗಳ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.