ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 4,078 ದಿನಗಳ ಸತತ ಆಡಳಿತದ ಮೂಲಕ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ದಾಖಲೆಯನ್ನು ಮುರಿದು, ದೇಶವನ್ನು ಸದೃಢವಾಗಿ ಮುನ್ನಡೆಸುತ್ತಿರುವ ಸಮರ್ಥ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಅಭಿನಂದಿಸಿದ್ದಾರೆ.
ತಮ್ಮ X ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ, “ಪ್ರಧಾನಿ ಮೋದಿಜೀ ಅವರ ಸಾಧನೆ ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ. ವಿಶ್ವನಾಯಕರಾಗಿ ಜಗತ್ತಿನ ಮೆಚ್ಚುಗೆ ಗಳಿಸಿರುವ ಅವರು, ದಣಿವರಿಯದೆ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ದಕ್ಷ ಆಡಳಿತ, ಸಮರ್ಥ ನಾಯಕತ್ವ, ಮತ್ತು ಸ್ಪಂದನಶೀಲತೆಯೊಂದಿಗೆ ದೇಶವನ್ನು ಮುನ್ನಡೆಸುತ್ತಿರುವ ಮೋದಿಯವರ ಕಾರ್ಯಶೈಲಿ ನಮ್ಮಂತಹ ಕಾರ್ಯಕರ್ತರಿಗೆ ಚೈತನ್ಯದ ಚಿಲುಮೆಯಾಗಿದೆ,” ಎಂದು ಹೇಳಿದ್ದಾರೆ.
ವಿಕಸಿತ ಭಾರತ ನಿರ್ಮಾಣದ ಮಹಾಸಂಕಲ್ಪದೊಂದಿಗೆ ತಪಸ್ವಿಯಂತೆ ದೇಶ ಕಟ್ಟುವ ಕಾರ್ಯಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿರುವ ಮೋದಿಯವರ ನಾಯಕತ್ವದಲ್ಲಿ, ಭಾರತವು ಸಾಮಾಜಿಕ, ಆರ್ಥಿಕ, ಮೂಲಸೌಕರ್ಯ, ರಕ್ಷಣೆ, ಔದ್ಯೋಗಿಕ, ಶೈಕ್ಷಣಿಕ, ಮತ್ತು ವಿದೇಶಾಂಗ ಕ್ಷೇತ್ರಗಳಲ್ಲಿ ಗಣನೀಯ ಬದಲಾವಣೆಗಳನ್ನು ಕಂಡಿದೆ. “ಮೋದಿಯವರ ದಕ್ಷತೆಯಿಂದ ಭಾರತವು ಜಗತ್ತಿನ 4ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದೆ. ವಿಕಸಿತ ಭಾರತದ ಸಂಕಲ್ಪಿತ ಗುರಿಯನ್ನು ಶೀಘ್ರವಾಗಿ ತಲುಪುವ ದಿಶೆಯಲ್ಲಿ ದೇಶ ಸಾಗುತ್ತಿದೆ,” ಎಂದು ವಿಜಯೇಂದ್ರ ತಿಳಿಸಿದ್ದಾರೆ.
ಈ ಸಾಧನೆಗಾಗಿ ದೇಶದ ಜನತೆಯ ಪರವಾಗಿ ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಿರುವ ವಿಜಯೇಂದ್ರ, ಭಾರತವನ್ನು ವಿಶ್ವದಾದ್ಯಂತ ಗೌರವದಿಂದ ಕಾಣುವಂತೆ ಮಾಡಿರುವ ಅವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.