ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಬಿ.ಟಿ.ಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ 2024-25ನೇ ಸಾಲಿನ ₹27 ಕೋಟಿ ಮೊತ್ತದ ಅನುಮೋದಿತ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಕೆಲವು ಕಾಮಗಾರಿಗಳು ಇನ್ನೂ ಪ್ರಾರಂಭವೇ ಆಗಿಲ್ಲ ಎಂದು ಗಮನಿಸಿದ ಸಚಿವರು, ಜೆ.ಡಿ. ಮರ ಸ್ಲಂ ಮತ್ತು ಎನ್.ಎಸ್ ಪಾಳ್ಯ ವಾರ್ಡ್‌ನ ಅಂಗನವಾಡಿ ಕಟ್ಟಡ ಕಾಮಗಾರಿಯನ್ನು ಕೂಡಲೇ ಆರಂಭಿಸುವಂತೆ ಆದೇಶಿಸಿದರು. ಮಂದಗತಿಯಲ್ಲಿ ಸಾಗುತ್ತಿರುವ ಗುತ್ತಿಗೆದಾರರಿಗೆ ಸಾಕಷ್ಟು ಅವಕಾಶ ನೀಡಿದ್ದರೂ ಕೆಲಸ ಮುಗಿಸದಿದ್ದಲ್ಲಿ ಟೆಂಡರ್ ರದ್ದುಗೊಳಿಸಿ ಮರು ಟೆಂಡರ್ ಕರೆಯುವಂತೆ ಸೂಚಿಸಿದರು.
ಬಿಲ್ ಪಾವತಿಗೆ ಜಿಪಿಎಸ್ ದಾಖಲೆ ಕಡ್ಡಾಯ
ಕಾಮಗಾರಿ ಪೂರ್ಣಗೊಂಡ ನಂತರ ಜಿಪಿಎಸ್ ಚಿತ್ರಗಳು ಸೇರಿದಂತೆ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಬಿಲ್ ಪಾವತಿಸುವಂತೆ ತಿಳಿಸಿದ ಸಚಿವರು, ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆಯೂ ಆದೇಶ ನೀಡಿದರು.
ಲಕ್ಕಸಂದ್ರ ಶಾಲೆ ಕಾಮಗಾರಿ ಪ್ರಾರಂಭವಾಗಿದ್ದು, ಶಾಲಾ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು. ಹಿಂದಿನ ಸಾಲಿನ ಕಾಮಗಾರಿಗಳು ಮುಗಿದ ನಂತರವೇ ಚಾಲ್ತಿ ಸಾಲಿನ ಟೆಂಡರ್‌ಗಳನ್ನು ಕರೆಯುವಂತೆಯೂ ತಿಳಿಸಿದರು.
ಪಾದಚಾರಿ ಮಾರ್ಗ, ಸಿಸಿಟಿವಿ ನಿರ್ವಹಣೆಗೆ ಒತ್ತು
ಕ್ಷೇತ್ರದ ರಸ್ತೆಗಳ ಪಾದಚಾರಿ ಮಾರ್ಗಗಳು ಸರಿಯಾಗಿ ನಿರ್ವಹಣೆಯಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವರು, ಅಭಿಯಂತರರು ಕೂಡಲೇ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು. ಕೆಟ್ಟುಹೋಗಿರುವ ಸಿಸಿಟಿವಿಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಹೊಸದು ಅಳವಡಿಸುವಂತೆ ಸೂಚಿಸಿದರು.
ಕಿರಿಯ ಮತ್ತು ಸಹಾಯಕ ಅಭಿಯಂತರರು ದ್ವಿಚಕ್ರ ವಾಹನಗಳಲ್ಲಿ ವಾರ್ಡ್‌ಗಳ ರಸ್ತೆಗಳನ್ನು ಪರಿಶೀಲಿಸಿ, ನಿರ್ವಹಣೆಗೆ ಬೇಕಾದ ಕೆಲಸಗಳ ಪಟ್ಟಿ ತಯಾರಿಸುವಂತೆ ತಿಳಿಸಿದರು.
ಸ್ಕೈವಾಕ್, ಬ್ಲಾಕ್ ಸ್ಪಾಟ್ ತೆರವು
ಕಾರ್ಯನಿರ್ವಹಿಸದ ಸ್ಕೈವಾಕ್‌ಗಳನ್ನು ಪಿಪಿಪಿ ಮಾದರಿಯಲ್ಲಿ ಮರುಸ್ಥಾಪಿಸುವಂತೆಯೂ, ಸಿಲ್ಕ್ ಬೋರ್ಡ್ ಮತ್ತು ಕೋರಮಂಗಲ ಪಾಸ್‌ಪೋರ್ಟ್ ಕಚೇರಿ ಬಳಿಯ ಬ್ಲಾಕ್ ಸ್ಪಾಟ್‌ಗಳನ್ನು ತೆರವುಗೊಳಿಸುವಂತೆಯೂ ಸೂಚಿಸಿದರು. ಕಸ ಸಂಗ್ರಹ ಆಟೋಗಳು ನಿಗದಿತ ಸಮಯಕ್ಕೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು.
ಈಜಿಪುರ ಮೇಲ್ಸೇತುವೆಗೆ ಬೀದಿ ದೀಪ, ಮಡಿವಾಳ ಕೆರೆಗೆ ಅನುದಾನ
ಈಜಿಪುರ ಮೇಲ್ಸೇತುವೆ ಬಳಿ ಬೀದಿ ದೀಪಗಳನ್ನು ಅಳವಡಿಸುವಂತೆಯೂ, ಮಡಿವಾಳ ಕೆರೆ ಅಭಿವೃದ್ಧಿಗೆ ಹೆಚ್ಚುವರಿ ಅನುದಾನಕ್ಕೆ ಒತ್ತು ನೀಡುವಂತೆಯೂ ಸೂಚಿಸಿದ ಸಚಿವರು, ಅನಗತ್ಯ ವೈಟ್ ಟಾಪಿಂಗ್ ರದ್ದುಗೊಳಿಸಿ ಕೆರೆ ಅಭಿವೃದ್ಧಿಗೆ ಪ್ರಸ್ತಾವ ಸಲ್ಲಿಸುವಂತೆ ತಿಳಿಸಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್, ಅಪರ ಆಯುಕ್ತ ರಾಚಪ್ಪ, ಜಂಟಿ ಆಯುಕ್ತ ಸತೀಶ್ ಬಾಬು, ಮುಖ್ಯ ಅಭಿಯಂತರರು ಬಸವರಾಜ ಕಬಾಡೆ, ಕೆ.ವಿ. ರವಿ ಹಾಗೂ ಪೊಲೀಸ್, ಜಲಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.












