ಬೆಂಗಳೂರು: ನಿರುದ್ಯೋಗ ಸಮಸ್ಯೆಯನ್ನು ತಗ್ಗಿಸಲು ಕೃಷಿ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ವ್ಯಾಪಾರ ಕ್ಷೇತ್ರಗಳು ಪ್ರಮುಖ ಆಸರೆಯಾಗಿವೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನ ಟೌನ್ಹಾಲ್ನಲ್ಲಿ ಕೆಪೆಕ್ ಮತ್ತು ಖೇತಿವಾಲ ಸಂಸ್ಥೆಯ ಸಹಯೋಗದಲ್ಲಿ ಆಯೋಜಿತವಾದ ಕೃಷಿ ಜಾಗೃತಿ ಕಾರ್ಯಗಾರ ಹಾಗೂ ಖೇತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಕೃಷಿ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆಯಲ್ಲಿ ಉದ್ಯೋಗ ಸೃಷ್ಟಿಯ ಜೊತೆಗೆ ಸ್ವಯಂ-ಉದ್ಯೋಗದ ಅವಕಾಶಗಳು ಹೆಚ್ಚುತ್ತಿರುವುದಾಗಿ ತಿಳಿಸಿದರು. ಯುವ ಸಮುದಾಯ ಈ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಸಾಂಪ್ರದಾಯಿಕ ಕೃಷಿಯೊಂದಿಗೆ ತಂತ್ರಜ್ಞಾನ ಮತ್ತು ವೈಜ್ಞಾನಿಕ ಪದ್ಧತಿಗಳ ಅಳವಡಿಕೆಯಿಂದ ಸಮಯ, ಶ್ರಮ ಉಳಿತಾಯವಾಗುವುದರ ಜೊತೆಗೆ ಆದಾಯ ಹೆಚ್ಚಳವಾಗುತ್ತಿದೆ. ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆಗೆ ಆದ್ಯತೆ ನೀಡಿ, ಮಾರುಕಟ್ಟೆಯ ಬಗ್ಗೆ ಜ್ಞಾನ ವಿಸ್ತರಿಸಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.
ಕೆಪೆಕ್ ಸಂಸ್ಥೆಯು ರೈತರ ಉತ್ಪನ್ನಗಳ ಮೌಲ್ಯವರ್ಧನೆ, ರಫ್ತು ಮತ್ತು ಆಹಾರ ಉತ್ಪನ್ನ ತಯಾರಿಕೆ ಉದ್ಯಮವನ್ನು ಪ್ರೋತ್ಸಾಹಿಸಲು ಹೆಚ್ಚಿನ ಒತ್ತು ನೀಡುತ್ತಿದೆ. ಖೇತಿವಾಲ ಸಂಸ್ಥೆಯ ಸಹಕಾರದೊಂದಿಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಕೆಪೆಕ್ ಫಲಾನುಭವಿಗಳಿಗೆ ಮಾಡುತ್ತಿರುವುದು ಶ್ಲಾಘನೀಯ ಎಂದು ಸಚಿವರು ಹೇಳಿದರು.
PMFME ಯೋಜನೆಯಡಿ 15 ಲಕ್ಷ ಸಬ್ಸಿಡಿ: ಕೆಪೆಕ್ನ PMFME ಯೋಜನೆಯಡಿ ಕಿರು ಆಹಾರ ಸಂಸ್ಕರಣ ಉದ್ಯಮ ಸ್ಥಾಪನೆಗೆ ಅವಕಾಶವಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಒಟ್ಟು 15 ಲಕ್ಷ ರೂಪಾಯಿ ಸಬ್ಸಿಡಿ ಲಭ್ಯವಿದೆ. ಈ ಯೋಜನೆಗೆ 206 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ರೈತರ ಮಕ್ಕಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಚಿವರು ಒತ್ತಿ ಹೇಳಿದರು.
ಕೆಪೆಕ್ ಈ ವರ್ಷ 5,000 ಹೊಸ ಆಹಾರ ಉದ್ಯಮಗಳ ಸೃಷ್ಟಿಯ ಗುರಿಯನ್ನು ಹೊಂದಿದೆ. ಇದರ ಜೊತೆಗೆ ಕೃಷಿ ಇಲಾಖೆಯಲ್ಲಿ ವಿನೂತನ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, 8 ಕೋಟಿ ರೂಪಾಯಿ ಸಹಾಯಧನದೊಂದಿಗೆ 40 ನವೋದ್ಯಮಗಳನ್ನು ಸ್ಥಾಪಿಸಲಾಗಿದೆ.
ಯಾಂತ್ರೀಕರಣಕ್ಕೆ ಒತ್ತು: ರೈತರಿಗೆ ಯಾಂತ್ರೀಕರಣದ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ 900 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿ ಯಂತ್ರೋಪಕರಣಗಳನ್ನು ವಿತರಿಸಿದೆ. 128 ಕೋಟಿ ರೂಪಾಯಿ ವೆಚ್ಚದಲ್ಲಿ 344 ಹಾರ್ವೆಸ್ಟರ್ ಹಬ್ಗಳನ್ನು ಹಂಚಿಕೆ ಮಾಡಲಾಗಿದೆ. ಜೊತೆಗೆ, 1,075 ಕೋಟಿ ರೂಪಾಯಿ ವೆಚ್ಚದಲ್ಲಿ ಸೂಕ್ಷ್ಮ ನೀರಾವರಿ ಪರಿಕರಗಳನ್ನು ರೈತರಿಗೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಲಾನಯನ ಇಲಾಖೆ ನಿರ್ದೇಶಕ ಬಂಥನಾಳ, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ್, ನರ್ಬಾಡ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿ.ಎನ್. ಶರ್ಮಾ, ಎಸ್.ಎಲ್.ಬಿ.ಸಿ ಸಂಯೋಜಕ ಭಾಸ್ಕರ್ ಭಟ್ಟಾಚಾರ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಖೇತಿ ಪುರಸ್ಕಾರಕ್ಕೆ ಭಾಜನರಾದ ಅಧಿಕಾರಿಗಳು ಮತ್ತು ಸಂಸ್ಥೆಯ ಪ್ರತಿನಿಧಿಗಳನ್ನು ಸಚಿವರು ಸನ್ಮಾನಿಸಿದರು.












