ಬಾಗಲಕೋಟೆ: ಬಾಗಲಕೋಟೆ ಶಾಸಕರಾಗಿದ್ದ ಹೆಚ್.ವೈ.ಮೇಟಿಯವರು ನಿಷ್ಠಾವಂತ ರಾಜಕಾರಣಿಯಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇಟಿಯವರ ನಿಧನ ವೈಯಕ್ತಿಕವಾಗಿ ದೊಡ್ಡ ನಷ್ಟವೆಂದು ವ್ಯಕ್ತಪಡಿಸಿದರು.
ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮೇಟಿಯವರ ಕೊಡುಗೆ
ಬಾಗಲಕೋಟೆಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪನೆಗೆ ಮೇಟಿಯವರೇ ಕಾರಣ ಎಂದ ಮುಖ್ಯಮಂತ್ರಿಗಳು, ಅವರು ಈ ಸಂದರ್ಭದಲ್ಲಿ ಇಲ್ಲದಿರುವುದು ವಿಷಾದನೀಯ ಎಂದರು. ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಭರವಸೆ ನೀಡಿದರು.
1983ರಿಂದಲೇ ಒಡನಾಟ: ಜಾತ್ಯಾತೀತ ದೃಷ್ಟಿಕೋನ
1983ರಿಂದ ಮೇಟಿಯವರೊಂದಿಗೆ ಒಡನಾಡಿದ್ದೇನೆ ಎಂದ ಸಿದ್ದರಾಮಯ್ಯ, ಜನತಾ ಪಕ್ಷ, ಜನತಾ ದಳ ಮತ್ತು ಕಾಂಗ್ರೆಸ್‌ನಲ್ಲಿದ್ದರೂ ನನ್ನ ತೀರ್ಮಾನಗಳಿಗೆ ಬದ್ಧರಾಗಿದ್ದರು ಎಂದರು. ಅಹಿಂದ ಸಂಘಟನೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ದುಡಿದವರು. ಒಂದು ವರ್ಷ ಕಿರಿಯನಾಗಿದ್ದರೂ ನನ್ನನ್ನು ಗೌರವದಿಂದ ಕಾಣುತ್ತಿದ್ದರು. ಶಾಸಕ, ಸಂಸದ, ಸಚಿವ ಮತ್ತು ಅಧ್ಯಕ್ಷ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ ಮೇಟಿಯವರು ವಿನಯವಂತರಾಗಿದ್ದರು.
ಅಧಿಕಾರ ಶಾಶ್ವತವಲ್ಲ; ಜನರಿಂದ ದೊರಕುವ ಅಧಿಕಾರವನ್ನು ಜನೋಪಯೋಗಕ್ಕೆ ಬಳಸಬೇಕು ಎಂಬ ತತ್ವ ಪಾಲಿಸುತ್ತಿದ್ದರು. ಬಹಳ ವಿದ್ಯಾವಂತರಲ್ಲದಿದ್ದರೂ ರಾಜಕೀಯ ತತ್ವಗಳನ್ನು ತಪ್ಪದೇ ಅನುಸರಿಸುತ್ತಿದ್ದರು. ಕುರುಬ ಸಮುದಾಯದವರಾಗಿದ್ದರೂ ಜಾತ್ಯಾತೀತ ತತ್ವದ ಪಾಲಕರಾಗಿ, ಎಲ್ಲ ಜಾತಿ-ಧರ್ಮದ ಜನರನ್ನು ಪ್ರೀತಿಯಿಂದ ಕಾಣುತ್ತಿದ್ದರು ಎಂದು ಸ್ಮರಿಸಿದರು.
ಜನಾನುರಾಗಿಯಿಂದಲೇ ಬಾಗಲಕೋಟೆಯಲ್ಲಿ ಗೆಲುವು
ಬಾಗಲಕೋಟೆ ಕ್ಷೇತ್ರದಲ್ಲಿ ಗೆಲ್ಲಲು ಜನಾನುರಾಗ ಅಗತ್ಯ ಎಂದ ಮುಖ್ಯಮಂತ್ರಿಗಳು, 1996ರಲ್ಲಿ ಸಮೀಕ್ಷೆ ನಂತರ ಮೇಟಿಯವರಿಗೆ ಲೋಕಸಭಾ ಟಿಕೆಟ್ ನೀಡಲಾಗಿತ್ತು. ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ದೇವೇಗೌಡರು ಪ್ರಧಾನಿ ಆಗಲು ಇವರೇ ಕಾರಣಕರ್ತರು ಎಂದರು.
ಹಂತ ಹಂತವಾಗಿ ಬೆಳೆದವರು. ಪಂಚಾಯತಿ, ಎ.ಪಿ.ಎಂ.ಸಿ ಅಧ್ಯಕ್ಷರಿಂದ ಸಚಿವ ಸ್ಥಾನದವರೆಗೆ ಏರಿದರು. ಒಬ್ಬ ಕುರುಬ ಸಮುದಾಯದವರು ಬಾಗಲಕೋಟೆಯಲ್ಲಿ ಗೆಲ್ಲುವುದು ಸುಲಭವಲ್ಲ; ಎಲ್ಲರನ್ನೂ ಒಟ್ಟುಗೂಡಿಸುವ ಶಕ್ತಿ ಅವರಲ್ಲಿತ್ತು. ವೈರಿಗಳೊಂದಿಗೂ ಸೌಹಾರ್ದ ಸಾಧಿಸುತ್ತಿದ್ದ ವಿಶಿಷ್ಟ ಗುಣ ಹೊಂದಿದ್ದರು ಎಂದು ಹೊಗಳಿದರು.
ಸರಳ ಸಜ್ಜನಿಕೆಯ ವ್ಯಕ್ತಿತ್ವ
ಈ ಬಾರಿ ಮುಖ್ಯಮಂತ್ರಿಯಾದ ನಂತರ ಅಪರೂಪಕ್ಕೆ ಬರುತ್ತಿದ್ದರು. ರಾಜಕೀಯ ಮತ್ತು ವೈಯಕ್ತಿಕ ನಷ್ಟವಾಗಿದೆ. ನನ್ನ ಅನುಯಾಯಿಗಳಲ್ಲಿ ಅಗ್ರಗಣ್ಯರು. ಆಸೆ-ದುರಾಸೆ ಇಲ್ಲದ ಸರಳ ಸಜ್ಜನಿಕೆಯ ವ್ಯಕ್ತಿ. ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಇವರ ಸಾವಿನಿಂದ ಬಡವಾಗಿದೆ ಎಂದು ವಿಷಾದಿಸಿದರು.
ಹುಟ್ಟು ಆಕಸ್ಮಿಕ, ಸಾವು ಖಚಿತ; ಮಧ್ಯೆ ಇರುವ ಜೀವನವನ್ನು ಸಾರ್ಥಕಗೊಳಿಸುವುದೇ ಮುಖ್ಯ. ಮೇಟಿಯವರು ಸಾರ್ಥಕ ಜೀವನ ನಡೆಸಿದ್ದಾರೆ. ಅವರ ಆದರ್ಶಗಳು ಇತರರಿಗೆ ಮಾದರಿಯಾಗಲಿ. ಇನ್ನೊಬ್ಬ ಮೇಟಿ ಹುಟ್ಟುವುದು ಕಷ್ಟ; ಮೇಟಿಗೆ ಮೇಟಿಯೇ ಸಾಟಿ. ಜನಾಶೀರ್ವಾದದಿಂದ ಎತ್ತರಕ್ಕೇರಿದ್ದರು ಎಂದರು.
ಮೇಟಿಯವರ ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರಕಲಿ, ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.











