ಬೆಂಗಳೂರು: ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದಕ್ಕೆ ಮುನ್ನುಡಿ ಬರೆದ ಬೆಂಗಳೂರಿನ ಶ್ರೀ ಕಂಠೀರವ ಚಿನ್ನಸ್ವಾಮಿ ಕ್ರೀಡಾಂಗಣವು ಇಂದು “ನೀರಜ್ ಚೋಪ್ರಾ ಕ್ಲಾಸಿಕ್-2025” ಎಂಬ ಅಂತಾರಾಷ್ಟ್ರೀಯ ಜಾವೆಲಿನ್ ಎಸೆತ ಕ್ರೀಡಾಕೂಟಕ್ಕೆ ಸಾಕ್ಷಿಯಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರೊಂದಿಗೆ ಭಾಗವಹಿಸಿ, ವಿಶ್ವದ ಶ್ರೇಷ್ಠ ಜಾವೆಲಿನ್ ಎಸೆತಗಾರರ ಕ್ರೀಡಾ ಪ್ರದರ್ಶನವನ್ನು ವೀಕ್ಷಿಸಿದರು ಮತ್ತು ವಿಜೇತರಿಗೆ ಪದಕಗಳನ್ನು ಪ್ರದಾನ ಮಾಡಿ ಗೌರವಿಸಿದರು.
ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ, ಹಾಲಿ ವಿಶ್ವ ಚಾಂಪಿಯನ್ ಹಾಗೂ ವಿಶ್ವದ ನಂ.1 ಜಾವೆಲಿನ್ ಪಟು ನೀರಜ್ ಚೋಪ್ರಾ ಅವರ ಹೆಸರಿನಲ್ಲಿ ಆಯೋಜಿತವಾದ ಈ ಪ್ರತಿಷ್ಠಿತ ಕ್ರೀಡಾಕೂಟವು, ಜಾವೆಲಿನ್ ಎಸೆತದ ದಿಗ್ಗಜರ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸುವ ವೇದಿಕೆಯಾಗಿ ಗುರುತಿಸಿಕೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಈ ಕ್ರೀಡಾಕೂಟವು ರಾಜ್ಯದಲ್ಲಿ ಮುಂದುವರಿದು ಯುವ ಜನರನ್ನು ಕ್ರೀಡೆಯತ್ತ ಆಕರ್ಷಿಸಲಿ ಮತ್ತು ಭಾರತದ ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಯಶಸ್ಸನ್ನು ತರಲಿ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ. ಪರಮೇಶ್ವರ್ ಅವರು ವಿಜೇತರಿಗೆ ಪ್ರಶಸ್ತಿಗಳು ಮತ್ತು ಪದಕಗಳನ್ನು ನೀಡಿ ಸನ್ಮಾನಿಸಿದರು. ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಹಾಗೂ ಶಾಸಕ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು.
“ನೀರಜ್ ಚೋಪ್ರಾ ಕ್ಲಾಸಿಕ್-2025” ಕ್ರೀಡಾಕೂಟವು ಭಾರತದ ಕ್ರೀಡಾ ಕ್ಷೇತ್ರದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದ್ದು, ರಾಜ್ಯದ ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಲಿದೆ ಎಂಬ ನಿರೀಕ್ಷೆಯಿದೆ.