ಬೆಂಗಳೂರು: ಶಾಂತಿನಗರದ ಗ್ರಾಹಕರ ವ್ಯಾಜ್ಯ ನಿವಾರಣ ನ್ಯಾಯಾಲಯಕ್ಕೆ ಬಂದಿದ್ದ ಕನಕಪುರ ಮೂಲದ 65 ವರ್ಷದ ಚಿನ್ನಾರಿಗೌಡ ಅವರು ದಿಢೀರ್ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.
ಬಿಎಂಟಿಸಿ ಕಟ್ಟಡದ ಮೊದಲ ಮಹಡಿಯಲ್ಲಿರುವ ಗ್ರಾಹಕರ ನ್ಯಾಯಾಲಯದಲ್ಲಿ ಬೆಳಿಗ್ಗೆ 10:30 ರ ಸುಮಾರಿಗೆ ಚಿನ್ನಾರಿಗೌಡ ಅವರು ಕುಳಿತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಸ್ಥಳೀಯರು ಅವರನ್ನು ಜಯದೇವ ಆಸ್ಪತ್ರೆಗೆ ರವಾನಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ಈ ದುರ್ಘಟನೆಯಿಂದ ನ್ಯಾಯಾಲಯದಲ್ಲಿ ಒಂದು ಕ್ಷಣ ಆಘಾತದ ವಾತಾವರಣ ಸೃಷ್ಟಿಯಾಯಿತು. ಚಿನ್ನಾರಿಗೌಡ ಅವರ ಅಕಾಲಿಕ ಮರಣಕ್ಕೆ ಕುಟುಂಬದವರು ಮತ್ತು ಸ್ಥಳೀಯರು ದುಃಖ ವ್ಯಕ್ತಪಡಿಸಿದ್ದಾರೆ.