ಬೆಂಗಳೂರು: ಕನಕಪುರ ಮೂಲದ 65 ವರ್ಷದ ಚಿನ್ನಾರಿಗೌಡ ಶಾಂತಿನಗರದ ಗ್ರಾಹಕರ ವ್ಯಾಜ್ಯ ನಿವಾರಣ ನ್ಯಾಯಾಲಯದಲ್ಲಿ ದಿಢೀರ್ ಹೃದಯಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಬಿಎಂಟಿಸಿ ಕಟ್ಟಡದ ಮೊದಲ ಮಹಡಿಯಲ್ಲಿರುವ ಗ್ರಾಹಕರ ವ್ಯಾಜ್ಯ ನಿವಾರಣ ಕೋರ್ಟ್‌ಗೆ ಚಿನ್ನಾರಿಗೌಡ ಬೆಳಿಗ್ಗೆ 10:30 ರ ಸುಮಾರಿಗೆ ತಮ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಜರಾಗಿದ್ದರು. ವಿಚಾರಣೆಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಅವರು ಒಮ್ಮಿಂದೊಮ್ಮೆಗೆ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಸ್ಥಳೀಯರು ಮತ್ತು ನ್ಯಾಯಾಲಯದ ಸಿಬ್ಬಂದಿ ಚಿನ್ನಾರಿಗೌಡರನ್ನು ಜಯದೇವ ಹೃದಯಾಲಯಕ್ಕೆ ರವಾನಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಅಸುನೀಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಈ ಘಟನೆಯಿಂದ ನ್ಯಾಯಾಲಯದಲ್ಲಿ ಹಾಜರಿದ್ದವರಲ್ಲಿ ಆಘಾತ ಮೂಡಿದ್ದು, ಚಿನ್ನಾರಿಗೌಡರ ಕುಟುಂಬಕ್ಕೆ ಸಾಂತ್ವನ ಸೂಚಿಸಲಾಗಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.