ಅಹಮದಾಬಾದ್: “ಈ ವರ್ಷವನ್ನು ಕಾಂಗ್ರೆಸ್ ಸಂಘಟನೆಯ ವರ್ಷವೆಂದು ಘೋಷಿಸಲಾಗಿದ್ದು, ಈ ದಿಕ್ಕಿನಲ್ಲಿ ಪಕ್ಷದ ಎಲ್ಲಾ ಘಟಕಗಳ ಬಲವರ್ಧನೆಗೆ ಒತ್ತು ನೀಡಲಾಗುತ್ತಿದೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಎಐಸಿಸಿ ಅಧಿವೇಶನದಲ್ಲಿ ಭಾಗವಹಿಸಲು ತೆರಳಿದ ಅವರು, ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಬ್ಲಾಕ್, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಪಕ್ಷವನ್ನು ಶಕ್ತಿಶಾಲಿಯಾಗಿ ಕಟ್ಟುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸಂಘಟನೆಯ ವಿಚಾರದಲ್ಲಿ ತಾರತಮ್ಯವಿಲ್ಲದೆ ಒಂದೊಂದೆ ಬದಲಾವಣೆಗಳನ್ನು ತರಲಾಗುತ್ತಿದೆ” ಎಂದು ತಿಳಿಸಿದರು.

“ಕಾಂಗ್ರೆಸ್ ಕಾರ್ಯಕರ್ತರ ಪಕ್ಷವಾಗಿದ್ದು, ಅದನ್ನು ಇನ್ನಷ್ಟು ಬಲಿಷ್ಠಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಈ ಅಧಿವೇಶನವು ಒಟ್ಟಿಗೆ ಚರ್ಚೆ ನಡೆಸಿ, ಸಮೂಹದ ಮೂಲಕ ಮುನ್ನಡೆಯುವ ವೇದಿಕೆಯಾಗಲಿದೆ” ಎಂದರು.
ಅಧಿವೇಶನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಪಕ್ಷದ ಎಲ್ಲಾ ಘಟಕಗಳ ಬಲವರ್ಧನೆ, ಸಂಘಟನೆಯ ಪುನರ್ ಕಟ್ಟಡ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಕಳೆದ ವಾರ ದೆಹಲಿಯಲ್ಲಿ ಜಿಲ್ಲಾ ಮಟ್ಟದ ಅಧ್ಯಕ್ಷರ ಸಭೆಯೂ ನಡೆದಿತ್ತು.
“1924ರಲ್ಲಿ ಮಹಾತ್ಮ ಗಾಂಧೀಜಿ ಕಾಂಗ್ರೆಸ್ ಅಧ್ಯಕ್ಷರಾದ ಹಿನ್ನೆಲೆಗೆ ಈಗ ನೂರು ವರ್ಷಗಳು ಪೂರೈಸಿವೆ. ಅವರು ಏಕ ನಾಯಕತ್ವವಲ್ಲ, ಸಾಮೂಹಿಕ ನಾಯಕತ್ವದ ಪರ ಧ್ವನಿಸಿದವರು” ಎಂದು DK ಶಿವಕುಮಾರ್ ನೆನಪಿಸಿದರು.

ಕಾಂಗ್ರೆಸ್ ಗೆಲುವು ಗುಜರಾತಿನಿಂದ ಆರಂಭವಾಗಬಹುದೆಂದು ಕೇಳಿದಾಗ, “ಖಂಡಿತವಾಗಿಯೂ ಹೌದು. ‘ಜತೆಗೆ ನಡೆಯುವುದು ಪ್ರಗತಿ’ ಎನ್ನುವ ಮಾತನ್ನು ನಾನು ಪುನರುಚ್ಚರಿಸುತ್ತೇನೆ” ಎಂದು ಆತ್ಮವಿಶ್ವಾಸದಿಂದ ಪ್ರತಿಕ್ರಿಯಿಸಿದರು.
ಇದರ ಜೊತೆಗೆ ಬಿಜೆಪಿ ಆಯೋಜಿಸಿರುವ ಜನಾಕ್ರೋಶ ಯಾತ್ರೆಯ ಕುರಿತು ವ್ಯಂಗ್ಯವಾಡಿದ ಅವರು, “ಬಿಜೆಪಿಯ ಜನಾಕ್ರೋಶ ಯಾತ್ರೆಯನ್ನು ಸ್ವಾಗತಿಸುತ್ತೇನೆ. ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಜನರ ಅಸಮಾಧಾನ ಬಿಜೆಪಿಯ ನಾಯಕರಿಗೆ ತಿಳಿಯುವಂತಾಗಲಿ. ತಮ್ಮದೇ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ” ಎಂದು ಟೀಕಿಸಿದರು.